Pages

ಶಿಕ್ಷಕರ ಒಡಲು

ಅಪಠಿತ ಗದ್ಯ - ಪದ್ಯಾಂಶ

ನೀಲ ನಕ್ಷೆಗೆ ಅನುಗುಣವಾಗಿ ಅಪಠಿತ ಗದ್ಯಭಾಗವನ್ನು ಓದಿ ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ ಎಂಬ ಪ್ರಶ್ನೆಯು 8, 9, ಮತ್ತು 10ನೆಯ ಕನ್ನಡ ಪ್ರಥಮ, ದ್ವಿತೀಯ ಮತ್ತು ತೃತಿಯ ಭಾಷೆಯ ಮೂರು ಪ್ರಶ್ನೆಪತ್ರಿಕೆಯಲ್ಲೂ ನಾಲ್ಕು ಅಂಕಗಳಿಗೆ ಇದೆ. ಆ ನಾಲ್ಕೂ ಅಂಕಗಳನ್ನು ಎಲ್ಲಾ ವಿದ್ಯಾರ್ಥಿಗಳೂ ಸುಲಭವಾಗಿ ಗಳಿಸುವಂತೆ ಮಾಡಲು ಅಭ್ಯಾಸಕ್ಕಾಗಿ ಈ ಕೆಳಗಿನ ಚಟುವಟಿಕೆಗಳು.


*************************************************************************************************
ನನ್ನ ಹೆಸರು ಅಬ್ದುಲ್ ಕಲಾಂ. ನನ್ನ ಬಾಲ್ಯ ಜೀವನ ಕಳೆದ ರಾಮೇಶ್ವರವು ಒಂದು ಸಣ್ಣ ದ್ವೀಪ. ಅಲ್ಲಿನ ಅತಿ ಎತ್ತರದ ಭೂಭಾಗವೆಂದರೆ ಗಂಧಮಾದನ ಪರ್ವತ. ಎಲ್ಲೆಡೆ ತಲೆದೂಗುತ್ತಿರುವ ಹಸಿರು-ಹಸಿರಾದ ತೆಂಗಿನ ತೋಟಗಳು. ದೂರದಲ್ಲಿ ಸಮುದ್ರ, ಇವುಗಳ ನಡುವೆ ಆಕಾಶವನ್ನು ಆಳುತ್ತಿರುವೆನೋ ಎಂಬಂತೆ ತಲೆ ಎತ್ತಿ ನಿಂತಿರುವ ರಾಮನಾಥ ಸ್ವಾಮಿ ದೇವಸ್ಥಾನದ ಗೋಪುರ. ಆಗ ರಾಮೇಶ್ವರ ಒಂದು ಶಾಂತವಾದ ಪುಟ್ಟ ಪಟ್ಟಣವಾಗಿತ್ತು. ದೇವಸ್ಥಾನ ಹಾಗೂ ಅಕ್ಕಪಕ್ಕದ ಬೀದಿಗಳು ಸದಾ ಯಾತ್ರಾರ್ಥಿಗಳಿಂದ ತುಂಬಿರುತ್ತಿದ್ದವು.ರಾಮೇಶ್ವರದ ನಾಗರಿಕರಲ್ಲಿ ಹೆಚ್ಚಿನವರು ಹಿಂದುಗಳು. ಕೆಲವು ಮಂದಿ ನಮ್ಮಂತಹ ಮುಸ್ಲಿಮರು. ಅಂತೆಯೇ ಕೆಲವು ಜನ ಕ್ರೈಸ್ತರೂ ಇದ್ದಾರೆ. ಪ್ರತಿ ಸಮುದಾಯವೂ ಇತರ ಸಮುದಾಯಗಳ ಜತೆ ಸ್ನೇಹದಿಂದಲೂ ನೆಮ್ಮದಿಯಿಂದಲೂ ಜೀವನ ಮಾಡುತ್ತಿದ್ದವು. ಹೊರ ಜಗತ್ತಿನ ಒಡಕುಗಳು ರಾಮೇಶ್ವರದ ಒಳಕ್ಕೆ ಬಂದದ್ದೇ ಇಲ್ಲ. ಸದ್ದುಗದ್ದಲವಿಲ್ಲದ ಸೌಹಾರ್ದ ಅನೇಕ ತಲೆಮಾರುಗಳಿಂದ ನಡೆದು ಬಂದಿದೆ.

ಕನ್ನಡ ಪ್ರಥಮ ಭಾಷೆಗಾಗಿ
1. ರಾಮೇಶ್ವರವು ಪ್ರಶಾಂತವಾದ ಪುಟ್ಟ ಪಟ್ಟಣವಾಗಿತ್ತೆಂದು ಹೇಳಲು ಕಾರಣವೇನು?
2. ರಾಮೇಶ್ವರವು ಸೌಹಾರ್ದ ಜೀವನಕ್ಕೆ ಹೇಗೆ ಹೆಸರಾಗಿತ್ತು?
1. ರಾಮೇಶ್ಚರದ ಪ್ರಾಕೃತಿಕ ಸನ್ನಿವೇಶವನ್ನು ವರ್ಣಿಸಿರಿ.
2. ರಾಮೇಶ್ದರದಲ್ಲಿದ್ದ ಕೋಮು ಸೌಹಾರ್ದತೆಯನ್ನು ಕುರಿತು ಬರೆಯಿರಿ.

ಕನ್ನಡ ದ್ವಿತೀಯ ಮತ್ತು ತೃತೀಯ ಭಾಷೆಗಾಗಿ
1. ಅಬ್ದುಲ್ ಕಲಾಂ ತಮ್ಮ ಬಾಲ್ಯವನ್ನು ಎಲ್ಲಿ ಕಳೆದರು?
2. ರಾಮೇಶ್ವರದಲ್ಲಿರುವ ಅತಿ ಎತ್ತರದ ಭೂಭಾಗ ಯಾವುದು?
3. ಆಕಾಶವನ್ನು ಆಳುತ್ತಿರುವೆನೋ ಎಂಬಂತೆ ತಲೆ ಎತ್ತಿನಿಂತಿರುವುದು ಯಾವುದು?
4. ರಾಮೇಶ್ವರದಲ್ಲಿ ಯಾವ ಯಾವ ಸಮುದಾಯದವರಿದ್ದಾರೆ?
1. ರಾಮೇಶ್ವರದಲ್ಲಿರುವ ದೇವಾಲಯ ಯಾವುದು?
2. ಗಂಧಮಾದನ ಪರ್ವತದ ವಿಶೇಷತೆ ಏನು?
3. ರಾಮೇಶ್ವರದ ಜನ ಯಾವ ರೀತಿ ಜೀವನ ಮಾಡುತ್ತಿದ್ದಾರೆ?
4. ದೇವಾಲಯದ ಅಕ್ಕ ಪಕ್ಕದ ಬೀದಿ ಯಾವರೀತಿ ಇರುತ್ತಿತ್ತು?


*************************************************************************************************
ನನ್ನ ಹೆಸರು ಅಬ್ದುಲ್ ಕಲಾಂ. ನಾನು ಬೆಳೆದ ರಾಮೇಶ್ವರ ಕೋಮು ಸಾಮರಸ್ಯಯಿಂದ ಪ್ರಶಾಂತವಾಗಿತ್ತು. ನಮ್ಮ ಮುತ್ತಾತ ರಾಮನಾಥ ಸ್ವಾಮಿ ದೇವಾಲಯದ ವಿಗ್ರಹ ಕಾಪಾಡಿದ ಘಟನೆಯನ್ನು ನಮ್ಮ ತಂದೆ ಹೇಳುತ್ತಿದ್ದರು. ಉತ್ಸವಗಳ ಸಂದರ್ಭ ದೇವಸ್ಥಾನದ ಉತ್ಸವ ಮೂರ್ತಿಯನ್ನು ಅಲಂಕಾರ ಮಾಡಿ ದೇವಾಲಯದ ಪ್ರದಕ್ಷಿಣೆಯಲ್ಲಿ ಒಯ್ಯುತ್ತಾರೆ. ರಾಮೇಶ್ವರದ ಎಲ್ಲರೂ ಜಾತಿ-ಧರ್ಮ ಭೇದವಿಲ್ಲದೆ ಇದರಲ್ಲಿ ಭಾಗವಹಿಸುತ್ತಾರೆ. ಅಂಥ ಒಂದು ಮೆರವಣಿಗೆ ಸಂದರ್ಭ ಉತ್ಸವ ಮೂರ್ತಿ ಆಕಸ್ಮಿಕವಾಗಿ ಕೆರೆಗೆ ಬಿತ್ತು. ಅಲ್ಲಿದ್ದವರೆಲ್ಲ ದಿಗ್ಭ್ರಾಂತರಾದರು. ಅದೊಂದು ಅಪಶಕುನ, ಏನು ಗಂಡಾಂತರ ಕಾದಿದೆಯೋ ಎಂದು ಅರ್ಚಕರೂ ಜನರೂ ಭಯಪಟ್ಟರು. ನನ್ನ ಮುತ್ತಾತ ಧೈರ್ಯ ಕಳೆದುಕೊಳ್ಳಲಿಲ್ಲ. ತಕ್ಷಣ ಕೆರೆಗೆ ಜಿಗಿದು ಜಾಲಾಡಿ ವಿಗ್ರಹ ಎತ್ತಿಕೊಂಡು ಮೇಲೆ ಬಂದರು. ಮುಸ್ಲಿಮನೊಬ್ಬ ಹಿಂದೂ ವಿಗ್ರಹವನ್ನು ಮುಟ್ಟಿದನೆಂಬ ಮಾತನ್ನು ಯಾರೂ ಆಡಲಿಲ್ಲ. ಅರ್ಚಕರು ತುಂಬಾ ಸಂತೋಷಗೊಂಡು ಭಾವುಕರಾಗಿ ನನ್ನ ಮುತ್ತಾತನಿಗೆ ಕೃತಜ್ಞತೆ ಹೇಳಿದರು. ಉತ್ಸವ ಸಾಂಗವಾಗಿ ನಡೆಯಿತು. ನನ್ನ ಮುತ್ತಾತ ರಾಮೇಶ್ವರದ ಜನರಿಗೆ ಹೀರೋ ಆದರು. ಉತ್ಸವದಲ್ಲಿ ಪ್ರತಿವರ್ಷದ ಮೊದಲ ಮರ್ಯಾದೆ ನನ್ನ ಮುತ್ತಾತನಿಗೆ ಸಲ್ಲತಕ್ಕದ್ದು ಎಂದು ದೇವಸ್ಥಾನದ ಆಡಳಿತದವರು ಘೋಷಿಸಿದರು. ನಂತರ, ಇದು ನಮ್ಮ ಕುಟುಂಬದ ಮುಂದಿನ ಪೀಳಿಗೆಗೂ ಮುಂದುವರೆಯಿತು.

ಕನ್ನಡ ಪ್ರಥಮ ಭಾಷೆಗಾಗಿ
1. ರಾಮೇಶ್ವರದ ಅರ್ಚಕರು ಭಯಭೀತರಾಗಲು ಕಾರಣವೇನು? ವಿವರಿಸಿ.
2. ಅಬ್ದುಲ್ ಕಲಾಂ ಮುತ್ತಾತ ರಾಮೇಶ್ವರದ ಜನರಿಗೆ ಹೀರೋ ಆದುದು ಹೇಗೆ?
1. ಉತ್ಸವದ ಸಂದರ್ಭದಲ್ಲಿ ರಾಮೇಶ್ವರದಲ್ಲಿ ನಡೆದ ಆಕಸ್ಮಕ ಘಟನೆಯನ್ನು ಕುರಿತಿ ಬರೆಯಿರಿ.
2. ರಾಮೇಶ್ವರದ ಒಂದು ಉತ್ಸವದಲ್ಲಿ ಮೊದಲ ಮರ್ಯಾದೆ ಅಬ್ದುಲ್ ಕಲಾಂ ಮನೆಯವರಿಗೆ ಸಲ್ಲುತ್ತದೆ ಏಕೆ?

ಕನ್ನಡ ದ್ವಿತೀಯ ಮತ್ತು ತೃತೀಯ ಭಾಷೆಗಾಗಿ
1. ಅಬ್ದುಲ್ ಕಲಾಂ ತಂದೆ ಯಾವ ಘಟನೆಯನ್ನು ಹೇಳುತ್ತಿದ್ದರು?
2. ಉತ್ಸವದ ಸಮಯದಲ್ಲಿ ಆಕಸ್ಮಿಕವಾಗಿ ನಡೆದ ಘಟನೆ ಯಾವುದು?
3. ಕೆರೆಯಿಂದ ವಿಗ್ರಹವನ್ನು ಮೇಲೆತ್ತಿ ತಂದವರು ಯಾರು?
4. ದೇವಸ್ಥಾನದ ಆಡಳಿತದವರು ಏನೆಂದು ಘೋಷಿಸಿದರು?
1. ಉತ್ಸವದ ಸಂದರ್ಭದಲ್ಲಿ ಜನರು ದಿಗ್ಬ್ರಾಂತರಾಗಲು ಕಾರಣವೇನು
2. ರಾಮೇಶ್ವರದ ಜನರಿಗೆ ಹೀರೋ ಆದವರು ಯಾರು?
3. ಅರ್ಚಕರು ಭಾವುಕರಾಗಲು ಕಾರಣವೇನು?
4. ರಾಮೇಶ್ವರದಲ್ಲಿ ನಡೆಯುವ ಉತ್ಸವದ ಮೊದಲ ಮರ್ಯಾದೆ ಯಾರಿಗೆ ಸಲ್ಲುತ್ತದೆ?


*************************************************************************************************

ಭಗತ್ ಸಿಂಗ್ ವರ್ಷದ ಬಾಲಕನಾಗಿದ್ದಾಗ ಅವನ ತಂದೆ ತಮ್ಮ ಮಿತ್ರರೊಡನೆ ಸುತ್ತಾಡಲುಹೊರಟರು. ಭಗತ್ ಸಿಂಗ್ ಸಹ ಅವರೊಂದಿಗೆ ಹೊರಟನು. ಹಿರಿಯರು ಮಾತಾಡುತ್ತ ಮುಂದೆ ಮುಂದೆಹೋಗಿದರು. ಊರಿನಾಚೆ ಹೊಲ ಗದ್ದೆಗಳನ್ನು ದಾಟಿ ಹೋಗುತ್ತಿದ್ದ ಹಿರಿಯರಿಗೆ ಬಾಲಕನ ನೆನಪಾಗಿತಿರುಗಿ ನೋಡಿದರು. ಅವನು ಗದ್ದೆಯೊಂದರಲ್ಲಿ ಕುಳಿತು ಏನೋ ಮಾಡುತ್ತಿದುದು ಕಂಡು ಬಂದಿತು. ಕುತೂಹಲದಿಂದ ಅವನ ಬಳಿಗೆ ಬಂದು 'ಏನು ಮಾಡುತ್ತಿದ್ದೀಯಾ?' ಎಂದು ಅವರು ಕೇಳಿದರು. ಆಗಬಾಲಕ ಭಗತ್ ಸಿಂಗ್ ' ಹೊಲದ ತುಂಬಾ ನಾನು ಬಂದೂಕುಗಳನ್ನು ಬೆಳೆಯಲು ಸಿದ್ಧಮಾಡುತ್ತಿದ್ದೇನೆ' ಎಂದು ಮುಗ್ಧವಾಗಿ ಉತ್ತರಿಸಿದನು. ಮಾತು ಹೇಳುವಾಗ ಅವನ ಕಣ್ಣಿನಲ್ಲಿ 'ನೆಡುವ ಬಂದೂಕುಗಳುಹೊಲದ ತುಂಬಾ ಬೆಳೆಯಲಿವೆ' ಎಂಬ ಬಲವಾದ ನಂಬಿಕೆ ಕಾಣುತ್ತಿತ್ತು! ಬಂದೂಕುಗಳನ್ನು ಏಕೆ ಬೆಳೆಯುವೆ ಎಂದು ಪ್ರಶ್ನಿಸಿದಕ್ಕೆ ' ಬಂದೂಕುಗಳಿಂದ ನಾವು ಆಂಗ್ಲರನ್ನು ನಮ್ಮ ದೇಶದಿಂದ ಹೊರಗೆಓಡಿಸುತ್ತೇನೆ' ಎಂದು ಉತ್ತರ ಕೊಟ್ಟನು! ಇದನ್ನು ಕೇಳುತ್ತಿದ್ದ ಹಿರಿಯರು ಬಾಲಕನ ದೇಶಭಕ್ತಿಯ ಬಗ್ಗೆ ಆಶ್ಚರ್ಯಚಕಿತರಾದರು.
ಭಗತ್ ಸಿಂಗ್ ಶಾಲೆಯಲ್ಲಿ ಕಲಿಯುತ್ತಿರುವಾಗಲೂ ತನ್ನ ಸಹಪಾಠಿಗಳಲ್ಲಿ ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸುವ ಕೆಲಸವನ್ನು ಮಾಡುತ್ತಿದ್ದರು. ಒಮ್ಮೆ ತರಗತಿಯಲ್ಲಿ ಎಲ್ಲರನ್ನು ಸಂಬೋಧಿಸಿ'ದೊಡ್ಡವರಾದ ಮೇಲೆ ಏನು ಆಗಲು ಇಚ್ಚಿಸುವಿರಿ?' ಎಂದು ಕೇಳಿದನು. ಪ್ರತಿಯೊಬ್ಬರು ತಮ್ಮ ಇಚ್ಚೆಯನ್ನು ವ್ಯಕ್ತಪಡಿಸಿದರು. ಒಬ್ಬನಂತು ನಾನು 'ಮದುವೆಯಾಗುತ್ತೇನೆ' ಎಂದು ಹೇಳಿದನು! ಅದನ್ನುಕೇಳಿದ ಬಾಲಕ ಭಗತ್,'ಮದುವೆ ಮಾಡಿಕೊಳ್ಳುವುದು ಒಂದು ಸಾಧನೆಯೇ? ನಾನು ಆಂಗ್ಲರನ್ನು ನಮ್ಮದೇಶದಿಂದ ಒದ್ದು ಓಡಿಸುತ್ತೇನೆ' ಎಂದು ಉದ್ಗರಿಸಿದನು!

ಕನ್ನಡ ಪ್ರಥಮ ಭಾಷೆಗಾಗಿ
1. ಹಿರಿಯರ ಜೊತೆ ಹೊರಗೆ ಹೊರಟ ಭಗತ್ ಸಿಂಗ್ ಹಿಂದೆ ಉಳಿಯಲು ಕಾರಣವೇನು?
2. ಭಗತ್ ಸಿಂಗ್ ಮತ್ತು ಆತನ ಸ್ನೇಹಿತರ ನಡುವೆ ಶಾಲೆಯಲ್ಲಿ ನಡೆದ ಸಂಭಾಷಣೆಯನ್ನು ಬರೆಯಿರಿ.
1. ಬಾಲಕ ಭಗತ್ ಸಿಂಗ್ ಗದ್ದೆಯಲ್ಲಿ ಕುಳಿತು ಏನು ಮಾಡಿತ್ತಿದ್ದನು? ಏಕೆ?
2. ಆಂಗ್ಲರನ್ನು ನಮ್ಮ ದೇಶದಿಂದ ಒದ್ದು ಓಡಿಸುತ್ತೇನೆ' ಎಂದು ಬಾಲಕಭಗತ್ ಸಿಂಗ್ ಉದ್ಗರಿಸಿದ ಸನ್ನಿವೇಶವನ್ನು ವಿವರಿಸಿರಿ.

ಕನ್ನಡ ದ್ವಿತೀಯ ಮತ್ತು ತೃತೀಯ ಭಾಷೆಗಾಗಿ
1. ಭಗತ್ ಸಿಂಗ್ ಗದ್ದೆಯಲ್ಲಿ ಕುಳಿತು ಏನು ಮಾಡುತ್ತಿರುವುದಾಗಿ ಹೇಳಿದನು?
2. ಹಿರಿಯರು ಆಶ್ಚರ್ಯಚಕಿತರಾದುದೇಕೆ?
3. ಭಗತ್ ಸಿಂಗನ ಕಣ್ಣಿನಲ್ಲಿ ಯಾವ ನಂಬಿಕೆ ಕಾಣುತ್ತಿತ್ತು?
4. ದೊಡ್ಡವನಾದ ಮೇಲೆ ತಾನು ಏನು ಮಾಡುತ್ತೇನೆಂದು ಭಗತ್ ಸಿಂಗ್ ಹೇಳಿದನು
1. ಬಾಲಕ ಭಗತ್ ಸಿಂಗ್ ಯಾರೊಡನೆ ಹೊರಟನು?
2. ಹಿರಿಯರು ಕುತೂಹಲದಿಂದ ಬಾಲಕನ ಬಳಿಗೆ ಬಂದುದೇಕೆ?
3. ಬಂದೂಕುಗಳನ್ನು ಏಕೆ ಬೆಳೆಯುತ್ತಿರುವೆ ಎಂಬ ಪ್ರಶ್ನೆಗೆ ಭಗತ್ ಸಿಂಗ್ ಕೊಟ್ಟ ಉತ್ತರವೇನು?
4. ಭಗತ್ ಸಿಂಗ್ ಶಾಲೆಯಲ್ಲಿ ಕಲಿಯುತ್ತಿರುವಾಗಲೇ ಏನು ಮಾಡುತ್ತಿದ್ದನು?


*************************************************************************************************
1919ರಂದು ನಡೆದ ಜಲಿಯನ್ ವಾಲಾ ಬಾಗ್ ದುರಂತ ನಡೆದ ಸ್ಥಳಕ್ಕೆ ಶಾಲೆಯಿಂದತಪ್ಪಿಸಿಕೊಂಡ ಹೋದ ಬಾಲಕ ಭಗತ್ ಸಿಂಗ್ ಖಾಲಿ ಬಾಟಲಿಯಲ್ಲಿ ರಕ್ತಸಿಕ್ತವಾಗಿದ್ದ ಮಣ್ಣನ್ನುತುಂಬಿಕೊಂಡು ಪ್ರತಿದಿನವೂ ಪೂಜಿಸುತ್ತಿದ್ದನು. ಮಣ್ಣು ರಕ್ತಸಿಕ್ತವಾಗಲು ಕಾರಣರಾದರ ವಿರುದ್ಧ ಸೇಡು ತೀರಿಸಿಕೊಳ್ಳದ ಹೊರತು ವಿಶ್ರಮಿಸುವುದಿಲ್ಲವೆಂದು ಪ್ರತಿಜ್ಞೆ ಮಾಡಿದನು. ಸ್ವದೇಶಿ ಚಳುವಳಿಯ ವೇಳೆ ತಮ್ಮ ಮತ್ತು ತಮ್ಮ ವಠಾರದ ಎಲ್ಲಾ ಮನೆಗಳಲ್ಲಿದ್ದ ವಿದೇಶಿ ಬಟ್ಟೆ ಮತ್ತು ವಸ್ತುಗಳನ್ನು ತಂದು ಬೆಂಕಿಗೆಆಹುತಿ ನೀಡುತ್ತಿದ್ದರು! ಕೊನೆಯ ಉಸಿರಿರುವವರೆಗೂ ಬ್ರಿಟಿಷರನ್ನು ದೇಶದಿಂದ ಹೊಡೆದೋಡಿಸುವ ಕಾರ್ಯದಲ್ಲೇ ನಿರತರಾಗಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣಾರ್ಪಣೆಮಾಡಿದರು.

ಕನ್ನಡ ಪ್ರಥಮ ಭಾಷೆಗಾಗಿ
1. ಜಲಿಯನ್ ವಾಲಾ ಬಾಗ್ ದುರಂತಕ್ಕೆ ಭಗತ್ ಸಿಂಗ್ ಹೇಗೆ ಪ್ರತಿಕ್ರಿಯಿಸಿದನು?
2. ಸ್ವದೇಶಿ ಚಳುಚಳಿಯಲ್ಲಿ ಭಗತ್ ಸಿಂಗ್ ಹೇಗೆ ಭಾಗವಹಿಸಿದನು?

ಕನ್ನಡ ದ್ವಿತೀಯ ಮತ್ತು ತೃತೀಯ ಭಾಷೆಗಾಗಿ
1. ಏಪ್ರಿಲ್ 13, 1919ರಂದು ನಡೆದ ಘಟನೆಯಾವುದು?
2. ಬಾಲಕ ಭಗತ್ ಸಿಂಗ್ ಶಾಲೆಯಿಂದ ತಪ್ಪಿಸಿಕೊಂಡು ಹೋಗಲು ಕಾರಣವೇನು?
3. ಬಾಲಕ ಭಗತ್ ಸಿಂಗ್ ಏನೆಂದು ಪ್ರತಿಜ್ಞೆ ಮಾಡಿದನು?
4. ಸ್ವದೇಶೀ ಚಳುವಳಿಯಲ್ಲಿ ಭಗತ್ ಸಿಂಗ್ ಮಾಡಿದ ಕೆಲಸವೇನು?


*************************************************************************************************
ಕನ್ನಡ ಕಾವ್ಯಲೋಕಕ್ಕೆ ವಿಶಿಷ್ಟ ಶೈಲಿ ಮತ್ತು ಲಯಗಳ ಮೂಲಕ ನಾದದ ಗುಂಗು ಹಿಡಿಸಿದಶಬ್ದಗಾರುಡಿಗ’, ‘ವರಕವಿ’, ‘ಸಾಧನಕೇರಿಯ ಅನರ್ಘ್ಯರತ್ನ’, ‘ಕನ್ನಡದ ಠಾಗೋರ್’, ‘ಸಹಜ ಕವಿ’, ‘ರಸ ಋಷಿಎಂದೆಲ್ಲಾ ಪ್ರಖ್ಯಾತರಾಗಿರುವ ಶ್ರೇಷ್ಠ ಕವಿ. ರಾ. ಬೇಂದ್ರೆ’. ಜಾನಪದ ಧಾಟಿಯಿಂದ ಪ್ರೇರೇಪಿತರಾಗಿಜಾನಪದ ಸೊಗಡಿನ ಆಡುಭಾಷೆಯ ದೇಶೀ ಶೈಲಿಯನ್ನು ಸಮರ್ಥವಾಗಿ ಬಳಸಿಕೊಂಡ ದೇಸೀಯ ಕವಿ.ಸುಶ್ರಾವ್ಯವಾಗಿ ಹಾಡಲು ಪೂರಕವಾಗುವಂತಹ ನಾದಮಾಧುರ್ಯವನ್ನು ತಮ್ಮ ರಚನೆಗಳಲ್ಲಿ ತುಂಬಿದರಸಕವಿ. ‘ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನಎಂದು ಜೀವನವನ್ನು ಸರಳವಾಗಿ ವ್ಯಾಖ್ಯಾನಿಸಿದ ಧೀಮಂತ ಕವಿ.
ಇವರ ಪೂರ್ಣ ಹೆಸರು ದತ್ತಾತ್ರೇಯ ರಾಮಚಂದ್ರ ಬೇಂದ್ರೆ. ಕಾವ್ಯನಾಮ ಅಂಬಿಕಾತನಯದತ್ತ.ಜನಿಸಿದ್ದು ಮಾಘಶುದ್ಧ 'ಗುರುಪ್ರತಿಪದಾ' ಮನ್ಮಥನಾಮ ಸಂವತ್ಸರ 1896 ಜನವರಿ 31 ಧಾರವಾಡದಮಂಗಳವಾರಪೇಟೆಯ ಪೋತನೀಸ್ ಗಲ್ಲಿಯಲ್ಲಿದ್ದ ಗುಣಾರಿಯವರ ಮನೆಯಲ್ಲಿ. ಅರ್ಥಾತ್ ಅಜ್ಜಿಗಂಗೂಬಾಯಿ ಮನೆಯಲ್ಲಿ. ತಂದೆ ರಾಮಚಂದ್ರ ಪಂತರು, ತಾಯಿ ಅಂಬೂತಾಯಿ ಅಂಬಿಕೆ(ಅಂಬವ್ವ).
ಪ್ರಶ್ನೆಗಳು:
1 ಬೇಂದ್ರೆಯವರು ಯಾವ ಹೆಸರುಗಳಿಂದ ಪ್ರಖ್ಯಾತರಾಗಿದ್ದಾರೆ?
2. ಬೇಂದ್ರೆಯವರನ್ನು ದೇಸೀಯ ಕವಿ ಎಂದು ಏಕೆ ಕರೆಯುತ್ತಾರೆ?
3. ಬೇಂದ್ರೆಯವರು ಹುಟ್ಟಿದ್ದು ಎಂದು?
4. ಬೇಂದ್ರೆಯವರು ಜೀವನವನ್ನು ಹೇಗೆ ವ್ಯಾಖ್ಯಾನಿಸಿದ್ದಾರೆ?

*************************************************************************************************

ಪಂಡಿತಾ ರಮಾಬಾಯಿ ಸರಸ್ವತಿಯವರು ಮಹಿಳೆಯರ ಸಾಮಾಜಿಕ,ಆರ್ಥಿಕ ಉನ್ನತಿಗಾಗಿ ದುಡಿದವರು. ಇವರ ತಂದೆ ಅನಂತಶಾಸ್ತ್ರಿಡೋಂಗ್ರೆ ಮತ್ತು ತಾಯಿ ಲಕ್ಷಿ ್ಮಬಾಯಿ ದೇಶ ಪ್ರವಾಸಮಾಡುತ್ತಿದ್ದಾಗ ತಲೆದೋರಿದ ಭೀಕರ ಬರಗಾಲದಿಂದನಿಧನರಾದರು. ಗಂಡ ಬಿಪಿನ್ ಬಿಹಾರಿ ದಾಸ್ ಕಾಲರಕ್ಕೆ ತುತ್ತಾಗಿಮರಣ ಹೊಂದಿದರು. ನಂತರ ರಮಾಬಾಯಿ ಅವರು ವಿದ್ಯಾಭ್ಯಾಸಮುಂದುವರಿಸಿ ಸಮಾಜ ಸೇವೆಗೆ ತನ್ನನ್ನು ಅಣಿಗೊಳಿಸಬೇಕೆಂದುನಿರ್ಧರಿಸಿ ಪುಣೆಗೆ ಬಂದರು. ಪುಣೆಯಲ್ಲಿಆರ್ಯ ಮಹಿಳಾ ಸಮಾಜಸ್ಥಾಪಿಸಿದರು. ಶಿಕ್ಷಣ ಪಡೆದು ಜ್ಞಾನವನ್ನು ಮತ್ತುಆತ್ಮಸ್ಥೈರ್ಯವನ್ನು ಗಳಿಸಿ ಸ್ವಾವಲಂಬಿಗಳಾಗಿ ಬದುಕುವಂತೆಹೆಣ್ಣು ಮಕ್ಕಳನ್ನು, ಬಾಲವಿಧವೆಯರನ್ನು ರಮಾಬಾಯಿ ಪ್ರೋತ್ಸಾಹಿಸಿದರು. ಇದಕ್ಕೆ ಪೂರಕವಾಗುವಂತೆಸ್ತ್ರೀ ಧರ್ಮ ನೀತಿಎನ್ನುವ ಪುಸ್ತಕವನ್ನು ಪ್ರಕಟಿಸಿದರು. ಹಂಟರ್ ಆಯೋಗದ ಎದುರುಹಾಜರಾದ ರಮಾಬಾಯಿ ಭಾರತದಲ್ಲಿ ಮಹಿಳೆಯರಿಗೆ ಶಿಕ್ಷಣದಆವಶ್ಯಕತೆಯ ಕುರಿತು ಸಮರ್ಥವಾದ ರೀತಿಯಲ್ಲಿ ವಾದಮಂಡಿಸಿದರು. ಇದು ಇಂಗ್ಲೆಂಡಿನ ರಾಣಿಯ ಗಮನಕ್ಕೆ ಬರುವಮೂಲಕ ಭಾರತದಲ್ಲಿ ಮಹಿಳೆಯರ ಪಾಲಿಗೆ ಶಿಕ್ಷಣ, ವೈದ್ಯಕೀಯಸೇವೆ ಮುಂತಾದ ಸವಲತ್ತುಗಳು ದೊರೆಯುವಂತಾಯಿತು.
ಪ್ರಶ್ನೆಗಳು :
1. ರಮಾಬಾಯಿ ಸರಸ್ವತಿಯವರು ಪುಣೆಗೆ ಏಕೆ ಬಂದರು?
2. ರಮಾಬಾಯಿ ಸರಸ್ವತಿಯವರ ತಂದೆ ತಾಯಿ ಮತ್ತು ಪತಿಯಸಾವಿಗೆ ಕಾರಣವೇನು?
3. ರಮಾಬಾಯಿ ಸರಸ್ವತಿಯವರುಸ್ತ್ರೀ ಧರ್ಮ ನೀತಿಎನ್ನುವಪುಸ್ತಕವನ್ನು ಏಕೆ ಪ್ರಕಟಿಸಿದರು.?
4. ಭಾರತದ ಮಹಿಳೆಯರಿಗೆ ಶಿಕ್ಷಣ, ವೈದ್ಯಕೀಯ ಸೇವೆ ಮುಂತಾದ ಸವಲತ್ತುಗಳು ದೊರೆಯುವಂತಾದುದು ಹೇಗೆ?
*************************************************************************************************
ಜಗತ್ತಿನಲ್ಲಿ ಅನುಭವ, ಭಾವನೆ, ಆಲೋಚನೆ, ಜ್ಞಾನ-ವಿಜ್ಞಾನಗಳು ವಿಕಾಸಗೊಂಡಂತೆಲ್ಲ ಅವುಗಳಿಗೆ ಸಮಾನವಾಗಿ ಭಾಷೆಯೂ ಬೆಳೆಯಿತ್ತದೆ. ಹೊಸ ಪದಗಳು ಸೃಷ್ಟಿಯಾಗುತ್ತವೆ. ಹಳೆಯ ಪದಗಳು ನವೀಕರಣಗೊಳ್ಳುತ್ತವೆ. ಗೆಡ್ಡೆ-ಗೆಣಸು, ಹಣ್ಣು- ಹಂಪಲುಗಳನ್ನು, ಹಸಿಮಾಂಸವನ್ನು ತಿಂದು ಮೃಗಗಳ ಮಧ್ಯೆ ಕಾಡಿನ ಗವಿ-ಗುಹೆಗಳಲ್ಲಿ ವಾಸಿಸುತ್ತಿದ್ದ ಮನುಷ್ಯ ಬೆಂಕಿ ಬೇಸಾಯಗಳನ್ನು ಕಂಡುಕೊಂಡು, ಗುಡಿಸಲು ಕಟ್ಟಿಕೊಂಡು, ಗುಂಪುಗುಂಪಾಗಿ ವಾಸಿಸಲು ತೊಡಗಿದಾಗ, ಅವನ ಜೀವನ ವಿಧಾನ ಧೋರಣೆಗಳು ಬದಲಾಗುತ್ತವೆ. ಬದಲಾದ ಜೀವನ ವಿಧಾನವನ್ನು ನಾಗರಿಕ ಎಂದು ಕರೆಯಲಾಗುತ್ತದೆ. ನಾಗರಿಕ ಜೀವನ ಸುಂದರವಾಗುತ್ತಿದ್ದಂತೆ ಬುದ್ಧಿ, ಭಾವ, ಕಲ್ಪನೆ ಮೊದಲಾದ ಅವನ ಆಂತರಿಕ ಶಕ್ತಿಗಳು ವಿಶ್ವ ಚೈತನ್ಯದ ಪ್ರತೀಕಗಳೆನ್ನುವಂತೆ ವಿಕಾಸಗೊಳ್ಳುತ್ತವೆ. ಮಾನವ ಚೇತನದ ಸಾರ ಸರ್ವಸ್ವದಂತಿರುವ ಶಾಂತಿ ಶ್ರೇಯಸ್ಸುಗಳಗೆ ಕಾರಣವಾದ ವಿಕಾಸ ಕ್ರಮವನ್ನು ಸಂಸ್ಕೃತಿ ಎಂದು ಗುರುತಿಸಲಾಗುತ್ತದೆ. ಇಂಗ್ಲೀಷಿನಲ್ಲಿ ಅದಕ್ಕೆಕಲ್ಚರ್ಎಂದು ಹೆಸರು. ನೂರು ನೂರೈವತ್ತು ವರ್ಷಗಳಿಂದೀಚೆಗೆ ಪದ ಬಳಕೆಯಲ್ಲಿದ್ದರೂ ಅಂತಃಶ್ಚೇತನ ವಿಕಾಸಕ್ರಮ ಮನುಷ್ಯನೊಂದಿಗೆ ಪ್ರಾರಂಭವಾಗಿರಬೇಕು.
ಸಮ್ಯಕ್ ಕರಣ, ಸಮ್ಯಕ್ ಕೃತಿ ಸಂಸ್ಕೃತಿ. ನಮ್ಮ ಜೀವನವನ್ನು ಸಾಧುವನ್ನಾಗಿ ಮಾಡಿಕೊಳ್ಳುವ ವಿಧಾನವೇ ಸಂಸ್ಕೃತಿ. ಎಂದು ಹೇಳಬಹುದಾಗಿದೆ.

ಪ್ರಥಮ ಭಾಷೆ ಕನ್ನಡ
1. ಯಾವುದನ್ನು ಸಂಸ್ಕೃತಿ ಎಂದು ಗುರುತಿಸಲಾಗುತ್ತದೆ?
2. ನಾಗರಿಕ ಜೀವನವು ಆರಂಭವಾದುದು ಹೇಗೆ?

ದ್ವಿತೀಯ ಭಾಷೆ ಕನ್ನಡ
1. ಭಾಷೆ ಹೇಗೆ ಬೆಳೆಯಿತ್ತದೆ?
2. ಮೇಲಿನ ವಾಕ್ಯವೃಂದದಲ್ಲಿರುವ ಜೋಡು ನುಡಿಗಳಾವುವು?
3. ಸಂಸ್ಕೃತಿ ಎಂದರೇನು?
4. ಮಾನವನ ಆಂತರಿಕ ಶಕ್ತಿಗಳಾವುವು?

*************************************************************************************
ಯಾವ ಕುಶಲಕರ್ಮದಿಂದ ವಸ್ತುವಿನಲ್ಲಿ ಸೌಂದರ್ಯ ಗುಣವು ಉತ್ಪನ್ನವಾಗುವುದೋ ಅದಕ್ಕೆ ಕಲೆಯೆಂದು ಹೆಸರು. ಕಲೆಯು ಒಮ್ಮೊಮ್ಮೆ ವಸ್ತುವಿನ ಉಪಯುಕ್ತತೆಯನ್ನುಹೆಚ್ಚಿಸುತ್ತತದೆ. ಆಗ ಅದು ಉಪಯೋಗಿ ಕಲೆ ಎನಿಸುವುದು. ಇದು ಕುಂಬಾರಿಕೆ, ಕಂಬಾರಿಕೆ, ಬಡಗಿತನ ಇತ್ಯಾದಿ ಔದ್ಯೋಗಿಕ ಕಲೆಗಳಲ್ಲಿ ಸಮಾವೇಶವಾಗಿ ಹೋಗಿದೆ. ಇನ್ನೊಂದು ಲಲಿತಕಲೆ. ಇದು ಮನಸ್ಸಿಗೆ ಆನಂದವನ್ನುಂಟು ಮಾಡುವುದು. ಇದರಲ್ಲಿ ವಾಸ್ತು, ಮೂರ್ತಿ, ಚಿತ್ರ, ಸಂಗೀತ, ಲೇಖನ ಮೊದಲಾದ ಕಲೆಗಳು ಸೇರುತ್ತವೆ. ಕಲೆಯ ಎರಡು ಅಂಗಗಳು ಮಾನವನ ಉನ್ನತಿಗೂ, ವಿಕಾಸಕ್ಕೂ ಅತ್ಯವಶ್ಯಕವಾಗಿವೆ. ಒಂದು ನಮ್ಮ ಅವಶ್ಯಕತೆಗಳನ್ನು ಈಡೇರಿಸಿ, ಶಾರೀರಿಕ, ಆರ್ಥಿಕ ಉನ್ನತಿಯನ್ನು ಸಾಧಿಸುವುದು ಹಾಗೂ ಇನ್ನೊಂದು ಅಲೌಕಿಕ ಆನಂದವನ್ನು ಒದಗಿಸಿ, ಹೃದಯದ ಬೆಳವಣಿಗೆಯನ್ನುಂಟು ಮಾಡುವುದು. ಆದ್ದರಿಂದ ಇವು ಜನಾಂಗದ ಪ್ರಗತಿಯ ಪ್ರತೀಕಗಳಾಗಿವೆ. ಆದರ್ಶದ ನಿದರ್ಶನಗಳಾಗಿವೆ. ಭಾರತೀಯರ ಮನೋಧರ್ಮ ಅಧ್ಯಾತ್ಮ ಪರವಾದುದು, ಅದು ಅವರ ಕಲೆಗಳಲ್ಲಿ ವ್ಯಕ್ತವಾಗಿದೆ. ಭಾರತೀಯರ ಜೀವನ, ಧರ್ಮ, ಸಂಸ್ಕೃತಿಗಳನ್ನು ಕಲೆಗಳು ಪ್ರತಿಬಿಂಬಿಸುತ್ತವೆ.

ಪ್ರಥಮ ಭಾಷೆ ಕನ್ನಡ
1. ಉಪಯೋಗಿ ಕಲೆ ಎಂದರೇನು? ಉದಾಹರಣೆಯೊಂದಿಗೆ ವಿವರಿಸಿ.
2. ಕಲೆಗಳು ಜನಾಂಗದ ಪ್ರಗತಿಯ ಪ್ರತೀಕಗಳಾಗಿವೆ ಎನ್ನುವುದನ್ನು ವಿವರಿಸಿ.

ದ್ವಿತೀಯ ಭಾಷೆ ಕನ್ನಡ
1. ಕಲೆ ಎಂದರೇನು?
2. ಭಾರತೀಯ ಮನೋಧರ್ಮವನ್ನು ಯಾವುದು ಪ್ರತಿಬಿಂಬಿಸುತ್ತವೆ?
3. ಔದ್ಯೋಗಿಕ ಕಲೆಗಳಾವುವು?
4. ಅಲೌಖಿಕ ಆನಂದವನ್ನು ಒದಗಿಸುವ ಕಲೆಗಳಾವುವು?

*************************************************************************************************
ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ತುಂಬ ಮಹತ್ವದ ಸ್ಥಾನ ಪಡೆದಿವೆ. ಅವು ನಮ್ಮ ಧಾರ್ಮಿಕ ಶ್ರದ್ಧೆಯ ಸಂಕೇತವಾಗಿ ಶತಮಾನಗಳಿಂದಲೂ ಉಳಿದುಕೊಂಡು ಬಂದಿವೆ. ಹಬ್ಬಗಳಿಗೆ ನಂಬಿಕೆ ಹಾಗೂ ಆಚರಣೆ ಎಂಬ ಎರಡು ಮುಖಗಳಿದ್ದು, ಅವು ಪರಸ್ಪರ ಪೂರಕ ಅಂಶಗಳಾಗಿವೆ. ನಂಬಿಕೆ ಧೃಡವಾಗಿದ್ದರೆ ಮಾತ್ರ ಆಚರಣೆ ಫಲಪ್ರದವಾಗಲು ಸಾಧ್ಯ. ಇಂಥ ನಂಬಿಕೆಯುಳ್ಳ ಭಾರತೀಯರು ಅನೇಕ ಹಬ್ಬಗಳನ್ನು ಆಚರಿಸಿಕೊಂಡು ಬಂದಿದ್ದಾರೆ.

ದ್ವಿತೀಯ ಭಾಷೆ ಕನ್ನಡ
1. ಹಬ್ಬಗಳು ಯಾವುದರ ಸಂಕೇತವಾಗಿವೆ?
2. ಆಚರಣೆಯು ಫಲಪ್ರದವಾಗುವುದು ಯಾವಾಗ?
3. ಶತಮಾನಗಳಿಂದಲೂ ಉಳಿದುಕೊಂಡು ಬಂದಿರುವುದು ಯಾವುದು?
4. ಹಬ್ಬಗಳಿಗಿರುವ ಎರಡು ಮುಖಗಳಾವುವು?

*************************************************************************************************
ವಿರೋಧಪಕ್ಷದ ಸದಸ್ಯರಾಗಿದ್ದ ಕೆಂಗಲ್ ಹನುಮಂತಯ್ಯನವರು ಒಮ್ಮೆ ನ್ಯಾಯವಿಧಾಯಕ ಸಭೆಯಲ್ಲಿ ಮಂತ್ರಿಗಳು ತಮ್ಮ ಸಂಬಳ ಸವಲತ್ತುಗಳನ್ನು ಕಡಿಮೆ ಮಾಡಿಕೊಳ್ಳಬೇಕೆಂಬ ಮಸೂದೆಯನ್ನು ಮಂಡಿಸಿ ಸರ್ಕಾರಕ್ಕೆ ಇರುಸುಮುರುಸು ಮಾಡಿದರು. ತಮ್ಮ ವಾದಕ್ಕೆ ಪೂರಕವಾಗಿ ಕೆಂಗಲ್ಲರು ಇಂಗ್ಲೆಂಡಿನ ಸಂಸದೀಯ ಪದ್ಧತಿಯ ರೀತಿನೀತಿಗಳು, ಅಲ್ಲಿನ ಮಂತ್ರಿಗಳ ಸಂಬಳಸಾರಿಗೆ ಬಗೆಗೆ ತಿಳಿಸಿ ಸಮರ್ಥವಾಗಿ ಮಾತನಾಡಿ ಎಲ್ಲರ ಪ್ರಶಂಸೆ ಗಳಿಸಿದರು. ಆದರೆ ಮೈಸೂರಿನ ಸನ್ನಿವೇಶದಲ್ಲಿ ಇಂಥ ಕ್ರಮ ಸೂಕ್ತವಲ್ಲವೆಂದು ಸೀತಾರಾಮಶಾಸ್ತ್ರಿಗಳು ಸರ್ಕಾರದ ಪರವಾಗಿ ವಾದವನ್ನು ಮಂಡಿಸಿ ಹನುಮಂತಯ್ಯನವರ ಶ್ರಮವನ್ನು ನೀರಿನಲ್ಲಿ ಕೊಚ್ಚಿಹೋಗುವಂತೆ ಮಾಡಿದರು. ಕಲಾಪ ಮುಗಿದು ಸದಸ್ಯರೆಲ್ಲಾ ಹೊರಡುವಾಗ ಕೆ. ಚಂಗಲರಾಯ ರೆಡ್ಡಿಯವರು ಎಲ್ಲರಿಗೂ ಕೇಳಿಸುವಂತೆಎಲ್ಲಾ ಹಾಳುಮಾಡಿಬಿಟ್ಟೆ!" ಎಂದು ತೆಲುಗಿನಲ್ಲಿ ಗಟ್ಟಿಯಾಗಿ ಶಾಸ್ತ್ರಿಗಳನ್ನು ಬೈದು ಹೊರಗೆ ಹೋದರು.

ಕನ್ನಡ ಪ್ರಥಮ ಭಾಷೆಗಾಗಿ
1. ಕೆಂಗಲ್ ಹನುಮಂತಯ್ಯನವರು ಎಲ್ಲರ ಪ್ರಶಂಸೆಗೆ ಒಳಗಾದ ಸನ್ನಿವೇಶವನ್ನು ಕುರಿತುಬರೆಯಿರಿ.
2. ಕೆಂಗಲ್ ಹನುಮಂತಯ್ಯನವರು ಶಾಸ್ತ್ರೀಗಳನ್ನು ಬೈಯಲು ಕಾರಣವೇನು?

ಕನ್ನಡ ದ್ವಿತೀಯ ಮತ್ತು ತೃತೀಯ ಭಾಷೆಗಾಗಿ
1. ಸರ್ಕಾರಕ್ಕೆ ಇರುಸುಮುರುಸಾಗಲು ಕಾರಣವೇನು ?
2. ಕೆಂಗಲ್ ಹನುಮಂತಯ್ಯನವರು ಎಲ್ಲರ ಪ್ರಶಂಸೆ ಗಳಿಸಿದುದು ಹೇಗೆ ?
3. ಸರ್ಕಾರದ ಪರವಾಗಿ ವಾದ ಮಾಡಿದವರು ಯಾರು ?
4. ಕೆ. ಚಂಗಲರಾಯ ರೆಡ್ಡಿಯವರು ಏನೆಂದು ಬೈದರು?

*************************************************************************************************

ಭೀಷ್ಮರ ಸೇನಾಧಿಪತ್ಯದಲ್ಲಿ ಎಂಟು ದಿನ ಭಯಂಕರ ಯುದ್ಧ ನಡೆಯಿತು. ಭೀಷ್ಮರನ್ನುಎದುರಿಸಿ ಗೆಲ್ಲುವ ಮಾರ್ಗಕಾಣದೆ ಪಾಂಡವರು ಚಿಂತಾಕ್ರಾಂತರಾದರು. ಎಂಟು ದಿನವಾದರೂಭೀಷ್ಮನು ಒಬ್ಬ ಪಾಂಡವನನ್ನೂ ಬಲಿತೆಗೆದುಕೊಳ್ಳಲಿಲ್ಲವಲ್ಲ ಎಂಬ ಆತಂಕದುರ್ಯೋಧನನಿಗಾಯಿತು. ಕೋಪದಿಂದ ದುರ್ಯೋಧನನು ಭೀಷ್ಮರನ್ನು ನನಗಿಂತ ನಿಮಗೆಪಾಂಡವರೆಂದರೆ ಹೆಚ್ಚು ಪ್ರೀತಿ ಆದ್ದರಿಂದಲೇ ನೀವು ಅವರಲ್ಲಿ ಒಬ್ಬನನ್ನೂ ಕೊಲ್ಲಲಿಲ್ಲವೆಂದುಹೀಯಾಳಿಸಿದನು. ತಕ್ಷಣವೇ ಭೀಷ್ಮನುನಾಳೆಯ ಯುದ್ಧದಲ್ಲಿ ನಾನು ಅರ್ಜುನನನ್ನು ಕೊಲ್ಲದಿದ್ದರೆನನ್ನ ಸೋಲನ್ನು ಒಪ್ಪಿಕೊಳ್ಳುತ್ತೇನೆಂದು ಪ್ರತಿಜ್ಞೆಮಾಡಿದರು. ಇದರಿಂದ ಕೌರವರಿಗೆ ಅತೀವಸಂತೋಷವೂ, ಪಾಂಡವರಿಗೆ ಅತಿಯಾದ ಭಯವೂ ಆಯಿತು. ನಮ್ಮೆಲ್ಲರ ರಕ್ಷಕನಾಗಿ ಭಗವಾನ್ ಶ್ರೀಕೃಷ್ಣನಿರುವಾಗ ನಮಗೇಕೆ ಯೋಚನೆ ಎಂದು ಅರ್ಜುನನು ನಿಶ್ಚಿಂತೆಯಿಂದಿದ್ದನು. ಅರ್ಜುನನು ತನ್ನಮೇಲೆ ಇಟ್ಟಿರುವ ದೃಢವಿಶ್ವಾಸದಿಂದ ಕೃಷ್ಣನು ಸಂತುಷ್ಟನಾದನು.

ಕನ್ನಡ ಪ್ರಥಮ ಭಾಷೆಗಾಗಿ
1. ಭೀಷ್ಮರು ಪ್ರತಿಜ್ಞೆ ಮಾಡಿದ ಸನ್ನಿವೇಶವನ್ನು ಕುರಿತು ಬರೆಯಿರಿ.
2. ಕೃಷ್ಣನು ಸಂತುಷ್ಟನಾಗಲು ಕಾರಣವೇನು?

ಕನ್ನಡ ದ್ವಿತೀಯ ಮತ್ತು ತೃತೀಯ ಭಾಷೆಗಾಗಿ
1. ದುರ್ಯೋಧನನ ಆತಂಕಕ್ಕೆ ಕಾರಣವೇನು?
2. ದುರ್ಯೋಧನನು ಭೀಷ್ಮರನ್ನು ಏನೆಂದು ಹೀಯಾಳಿಸಿದನು?
3. ಕೌರವರಿಗೆ ಅತೀವ ಸಂತೋಷವಾದುದೇಕೆ?
4. ಕೃಷ್ಣನು ಸಂತುಷ್ಟನಾದುದೇಕೆ?

************************************************************************************************* 

ಭಾರತೀಯರ ಸ್ವಾಭಿಮಾನದ ಸಂಕೇತ ಹಾಗೂ ದೇಶ ಭಕ್ತಿಯ ದ್ಯೋತಕವೇ ಆಗಿರುವ ನಮ್ಮರಾಷ್ಟ್ರಧ್ವಜವು, ಕೇಸರಿ, ಬಿಳಿ, ಹಸಿರು ಬಣ್ಣಗಳಿಂದ ಕೂಡಿರುವ ತ್ರಿವರ್ಣಧ್ವಜ. ಧ್ವಜದ ಅಗಲಮತ್ತು ಉದ್ದವು 2:3 ಅನುಪಾತದಲ್ಲಿದೆ. ಮಾನ್ಯ ಪಿಂಗಾಳಿ ವೆಂಕಯ್ಯನವರು ಇದನ್ನುವಿನ್ಯಾಸಗೊಳಿಸಿದವರು.

  ತ್ರಿವರ್ಣಧ್ವಜದಲ್ಲಿರುವ ಕೇಸರಿ ಬಣ್ಣವು, ಧೈರ್ಯ, ತ್ಯಾಗ ಮತ್ತು ದೇಶಭಕ್ತಿಯ ಪ್ರತೀಕವಾಗಿದೆ. ನಡುವಿನ ಬಿಳಿಯ ಬಣ್ಣವು ಶಾಂತಿ ಮತ್ತು ಸೌಹಾರ್ದತೆಯ ಸಂಕೇತವೆನಿಸಿದೆ. ಹಸಿರು ಬಣ್ಣವು ಭೂದೇವಿಯ ಪ್ರತೀಕವಾಗಿದ್ದು, ಸಮೃದ್ಧಿ ಮತ್ತು ನಂಬಿಕೆಯನ್ನು ಪ್ರತಿನಿಧಿಸುತ್ತದೆ. ಮಧ್ಯದಲ್ಲಿರುವ ಅಶೋಕ ಚಕ್ರವು ನೀಲಿ ಬಣ್ಣದಿಂದ ಕೂಡಿದ್ದು ಪ್ರಗತಿಯ ಸಂಕೇತವೇ ಆಗಿದೆ. ದೇಶದ ಬೆಳವಣಿಗೆ, ಶಿಸ್ತು, ನ್ಯಾಯ, ನಿರಂತರತೆಯನ್ನು ಇದು ಸೂಚಿಸುತ್ತದೆ

ಕನ್ನಡ ಪ್ರಥಮ ಭಾಷೆಗಾಗಿ
1. ನಮ್ಮ ರಾಷ್ಟ್ರಧ್ವಜದ ವಿನ್ಯಾಸ ಮತ್ತು ಮಹತ್ವವನ್ನು ತಿಳಿಸಿರಿ.
2. ನಮ್ಮ ರಾಷ್ಟ್ರ ಧ್ವಜದಲ್ಲಿರುವ ಬಣ್ಣಗಳು ಏನನ್ನು ಸೂಚಿಸುತ್ತವೆ
ಕನ್ನಡ ದ್ವಿತೀಯ ಮತ್ತು ತೃತೀಯ ಭಾಷೆಗಾಗಿ
1. ನಮ್ಮ ರಾಷ್ಟ್ರಧ್ವಜವನ್ನು ವಿನ್ಯಾಸಗೊಳಿಸಿದವರು ಯಾರು?
2. ತ್ರಿವರ್ಣಧ್ವಜದ ಅಗಲ ಮತ್ತು ಉದ್ದವು ಯಾವ ಅನುಪಾತದಲ್ಲಿದೆ?
3. ನಮ್ಮ ರಾಷ್ಟ್ರಧ್ವಜದ ಮಧ್ಯದಲ್ಲಿರುವ ಚಕ್ರವು ಏನನ್ನು ಸೂಚಿಸುತ್ತದೆ?
4. ನಮ್ಮ ರಾಷ್ಟ್ರಧ್ವಜದಲ್ಲಿ ನಿಮಗೆ ಅತಿಹೆಚ್ಚು ಇಷ್ಟವಾದ ಬಣ್ಣಯಾವುದು ಏಕೆ?

*************************************************************************************************
ಶರಣಎಂಬ ಶಬ್ದಕ್ಕೆ ಸಿದ್ಧ, ಮಹಂತ, ಅನುಭಾವಿ, ಜ್ಞಾನಿ ದಾರ್ಶನಿಕ ಎಂಬೆಲ್ಲಅರ್ಥಗಳಿವೆ. ವಾಸ್ತವವಾಗಿ ಅದು ವಿಕಾಸದ ಒಂದು ಪರಿಪೂರ್ಣ ಸ್ಥಿತಿ. ಇದುಸ್ಪಷ್ಟಗೊಂಡಾಗ ಶರಣ ಶಬ್ದದ ನಿಜವಾದ ಅರ್ಥ ನಮಗೆ ಮನವರಿಕೆಯಾಗುತ್ತದೆ.ಕಲ್ಲುಮಠದ ಪ್ರಭುದೇವನು ತನ್ನಲಿಂಗಲೀಲಾ ವಿಲಾಸ ಚಾರಿತ್ರ್ಯದಲ್ಲಿ ವಚನಗಳು,ಶರಣರುನಡೆದು ನುಡಿದ ಮಾತುಗಳುಎಂದು ವಿವರಿಸಿದ್ದು ಸತ್ಯ. ಶರಣಸಾಹಿತ್ಯ ಕೇವಲವೀರಶೈವರು ಬರೆದುದು ಎಂಬ ಕಾರಣಕ್ಕಾಗಿ ಅಲ್ಲ, ಅದರಲ್ಲಿ ಚಿರಂತನಮೌಲ್ಯಗಳಿವೆಎಂಬ ಕಾರಣಕ್ಕಾಗಿ ಇಂದಿಗೂ ಅದು ವಿಶ್ವಮಾನ್ಯವಾಗಿದೆ.

ಕನ್ನಡ ಪ್ರಥಮ ಭಾಷೆಗಾಗಿ
1. ಶರಣ ಶಬ್ದದ ವೈಶಿಷ್ಟ್ಯವೇನು?
2. ಶರಣಸಾಹಿತ್ಯದ ಮಹತ್ವವೇನು?

ಕನ್ನಡ ದ್ವಿತೀಯ ಮತ್ತು ತೃತೀಯ ಭಾಷೆಗಾಗಿ
1. ಶರಣ ಎಂಬ ಶಬ್ದಕ್ಕಿರುವ ಬೇರೆ ಬೇರೆ ಅರ್ಥಗಳನ್ನು ತಿಳಿಸಿರಿ.
2. ಶರಣ ಶಬ್ದದ ನಿಜವಾದ ಅರ್ಥ ನಮಗೆ ಯಾವಾಗ ಮನವರಿಕೆಯಾಗುತ್ತದೆ ?
3. ಶರಣಸಾಹಿತ್ಯವು ವಿಶ್ವಮಾನ್ಯವಾಗಲು ಕಾರಣವೇನು?
4. ಪ್ರಭುದೇವನ ಕೃತಿ ಯಾವುದು?
*************************************************************************************************

ಶರಣರು ಅನುಭವವನ್ನು ಕಲಾತ್ಮಕಗೊಳಿಸಲು ಪ್ರಯತ್ನಿಸದೆ ಜನರ ಬದುಕು ಕಲಾತ್ಮಕವಾಗಿರಬೇಕೆಂದು ಬಯಸಿದರು. ಹೀಗಾಗಿ ಅವರು ತಾವು ಒಲಿದಂತೆ ಹಾಡಿದರು, ಬರೆದರು, ಬದುಕಿದರು. ಶರಣ ಸಾಹಿತ್ಯಕ್ಕೆ ಜಾತಿಸೂತಕ, ವರ್ಗಸೂತಕ, ಲಿಂಗಸೂತಕಗಳು ಇರುವುದಿಲ್ಲ. ಶರಣ ಎನ್ನುವುದು ಜಾತಿಯಲ್ಲ, ಜ್ಯೋತಿರ್ಮಯ ವ್ಯಕ್ತಿತ್ವ. ಶರಣ ಸಾಹಿತ್ಯ ಸಮಸ್ತ ಮಾನವ ಕುಲಕ್ಕೆ ಸಂಬಂಧಿಸಿದ ಸಾಹಿತ್ಯ. ಮಾನವೀಯ ಮೌಲ್ಯಗಳ ಪ್ರತಿಪಾದನೆಯೇ ಸಾಹಿತ್ಯದಲ್ಲಿ ವಿಶೇಷವಾಗಿ ಕಾಣಸಿಗುತ್ತದೆ. ವಿಶ್ವದ ವಿವಿಧಭಾಗಗಳಲ್ಲಿ ಜನರು ಎದುರಿಸುತ್ತಿರುವ ಮಾನಸಿಕ ಅಶಾಂತಿ, ಸಾಮಾಜಿಕ ಸಂಘರ್ಷ,ಧಾರ್ಮಿಕ ಮತಾಂಧತೆ, ಮಾನವೀಯತೆಯ ಅವಹೇಳನ, ಮಾನವೀಯ ಮೌಲ್ಯಗಳ ಅಪಮೌಲ್ಯೀಕರಣ, ಭಯದ ಬದುಕು, ಜೀವನದ ಅಸ್ಥಿರತೆ, ಅಶಾಂತಿ ಮೊದಲಾದ ಹಲವಾರು ಜ್ವಲಂತ ಸಮಸ್ಯೆಗಳಿಗೆ ಶರಣ ಸಾಹಿತ್ಯ ಸಂಜೀವಿನಿಯೆನಿಸಿದೆ.

ಕನ್ನಡ ಪ್ರಥಮ ಭಾಷೆಗಾಗಿ
1. ಶರಣ ಸಾಹಿತ್ಯ ಸಮಸ್ತ ಮಾನವ ಕುಲಕ್ಕೆ ಸಂಬಂಧಿಸಿದ ಸಾಹಿತ್ಯವೆನಿಸಲುಕಾರಣವೇನು?
2. ಶರಣ ಸಾಹಿತ್ಯವು ಸಂಜೀವಿನಿ ಎನಿಸಲು ಕಾರಣವೇನು?

ಕನ್ನಡ ದ್ವಿತೀಯ ಮತ್ತು ತೃತೀಯ ಭಾಷೆಗಾಗಿ
1. ಶರಣರು ಏನನ್ನು ಬಯಸಿದರು?
2. ಶರಣಸಾಹಿತ್ಯದಲ್ಲಿ ವಿಶೇಷವಾಗಿ ಏನನ್ನು ಕಾಣಬಹುದು?
3. ವಿಶ್ವದ ವಿವಿಧ ಭಾಗಗಳಲ್ಲಿ ಜನರು ಎದುರಿಸುತ್ತಿರುವ ಸಮಸ್ಯೆಗಳಾವುವು?
4. ಶರಣ ಸಾಹಿತ್ಯ ಯಾವುದಕ್ಕೆ ಸಂಜೀವಿನಿ ಯಾಗಿದೆ?


*************************************************************************************************

ಶರಣರು ಕೊಟ್ಟ ಮಹತ್ವಪೂರ್ಣವಾದ ಕೊಡುಗೆಗಳಲ್ಲಿ ಕಾಯಕವು ಒಂದು. ಕಾಯಕವುವೈದಿಕರನಿಷ್ಕಾಮ ಕರ್ಮ’, ಜೈನರಅಪರಿಗ್ರಹ’, ಕ್ರೈಸ್ತರಕಾಲಿಂಗ್ಮುಂತಾದ ಪದಗಳಿಗಿಂತಲೂ ಭಿನ್ನವಾಗಿದೆ. “ಕಾಯವುಳ್ಳವರೆಲ್ಲ ಕಾಯಕ ಮಾಡಲೇಬೇಕು, ಗುರು-ಲಿಂಗ-ಜಂಗಮವಿರಲಿ ಎಲ್ಲವೂ ಕಾಯಕದೊಳಗುಎಂಬಲ್ಲಿ ಕಾಯಕ ಎಲ್ಲರಿಗೂ ಕಡ್ಡಾಯವಾಗಿದೆ. “ಕಾಯಕದಲ್ಲಿ ನಿರತನಾದರೆ ಗುರು ದರುಶನವಾದರೂ ಮರೆಯಬೇಕುಎಂಬ ಆಯ್ದಕ್ಕಿ ಮಾರಯ್ಯನ ವಚನ ಕಾಯಕ ತತ್ತ್ವಕ್ಕೆ ಉಜ್ವಲಉದಾಹರಣೆಯಾಗಿದ್ದು ಕಾಯಕನಿಷ್ಠೆಯನ್ನು ಎತ್ತಿ ಹಿಡಿದಿದೆ. “ಅಸಿ ಮಸಿ ಕೃಷಿ ವಾಣಿಜ್ಯ ಪಹರಿ ಬಾಗಿಲು ಬೊಕ್ಕಸ ಬಿಯಗ ಮುಂತಾದ ಕಾಯಕಗಳೆಲ್ಲ ಒಂದೇಯೆಂಬೆಎಂಬಅಕ್ಕಮ್ಮನ ವಚನದಿಂದ ಶರಣರು ಎಲ್ಲ ಕಾಯಕವನ್ನು ಸಮಾನವಾಗಿ ಕಂಡಿದ್ದಾರೆ ಎಂಬುದು ವಿದಿತವಾಗುತ್ತದೆ. “ಆವಾವ ಕಾಯಕದಲ್ಲಿ ಬಂದರೂ ಭಾವಶುದ್ಧವಾಗಿ ಗುರು-ಲಿಂಗ-ಜಂಗಮಕ್ಕೆ ಮಾಡುವುದೇ ಶಿವಪೂಜೆಎಂಬ ನುಲಿಯ ಚಂದಯ್ಯನ ವಚನದಿಂದ ಕಾಯಕವು ಗುರು-ಲಿಂಗ-ಜಂಗಮ ಸೇವೆಯ ಸಾಧನವಾಗಿರುವುದರಿಂದ ಅದು ಸತ್ಯ ಶುದ್ಧವಾಗಿರಬೇಕು. ‘ನಿಷ್ಕಾಮನಿಸ್ವಾರ್ಥದಿಂದ ಕೂಡಿದ್ದು ಶುಚಿತ್ವವನ್ನು ರೂಢಿಸಿಕೊಂಡಿರಬೇಕು. ಇಲ್ಲಿ ಯಾರ ಒತ್ತಾಸೆ ಇರಕೂಡದು ಎಂಬ ಭಾವವಿದೆ.

ಕನ್ನಡ ಪ್ರಥಮ ಭಾಷೆಗಾಗಿ
1. ‘ಕಾಯಕವು ಶರಣರು ಕೊಟ್ಟ ಮಹತ್ವಪೂರ್ಣವಾದ ಕೊಡುಗೆಯಾಗಿದೆ ಏಕೆ?
2. ಕಾಯಕವನ್ನು ಕುರಿತು ಶರಣ ಶರಣೆಯರು ನುಡಿದಿರುವ ನುಡಿಗಳಾವುವು?

ಕನ್ನಡ ದ್ವಿತೀಯ ಮತ್ತು ತೃತೀಯ ಭಾಷೆಗಾಗಿ
1. ‘ಕಾಯಕವು ಯಾವ ಪದಗಳಿಗಿಂತಲೂ ಭಿನ್ನವಾಗಿದೆ?
2. ಕಾಯಕ ತತ್ತ್ವಕ್ಕೆ ಉಜ್ವಲ ಉದಾಹರಣೆ ಯಾವುದು?
3. ಶರಣರು ಎಲ್ಲ ಕಾಯಕವನ್ನು ಸಮಾನವಾಗಿ ಕಂಡಿದ್ದಾರೆ ಎಂದು ಹೇಳುವನುಡಿಯಾವುದು?
4. ನುಲಿಯ ಚಂದಯ್ಯನ ವಚನದಿಂದ ತಿಳಿದುಬರುವ ವಿಚಾರ ಯಾವುದು?


*************************************************************************************************

ಪೂಜನೀಯ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತ ಕೃತಿಗಳು ಶ್ರವ್ಯ ಪರಂಪರೆಯಲ್ಲೂ ಉಳಿದು ಬೆಳೆದುಬಂದಿವೆ. ಸಂಸ್ಕೃತದಲ್ಲಿರುವ ರಾಮಾಯಣ ಮತ್ತು ಮಹಾಭಾರತವನ್ನು ಎಲ್ಲಾ ಭಾಷೆಗಳಲ್ಲೂ ರಚಿಸಿದ್ದಾರೆ. ವೇದವ್ಯಾಸರು ಸಂಸ್ಕೃತದಲ್ಲಿ ರಚಿಸಿದ ಮಹಾಭಾರತವನ್ನು ಆಧಾರವಾಗಿರಿಸಿಕೊಂಡು ಪಂಪ, ರನ್ನ, ಕುಮಾರವ್ಯಾಸ ಮೊದಲಾದವರು ಕನ್ನಡದಲ್ಲಿ ಕಾವ್ಯ ರಚಿಸಿದರು. ರಾಮಾಯಣ ಮಹಾಭಾರತ ಕಾವ್ಯಗಳು ಉತ್ತಮಗುಣ, ಸ್ವಭಾವಗಳನ್ನು ರೂಢಿಸಿಕೊಳ್ಳದ ವ್ಯಕ್ತಿ ಎಷ್ಟೇ ರೂಪ ಲಾವಣ್ಯ, ಸಂಪತ್ತು, ಶೌರ್ಯ, ಸಾಹಸ, ವೀರತನವನ್ನು ಪಡೆದಿದ್ದರೂ ಸ್ವತಃ ಆತನಿಗಾಗಲಿ, ಆತನ ಹಿರಿಯರಿಗಾಗಲಿ ಯಾವುದೇ ಉಪಯೋಗವಿಲ್ಲ. ಇಂಥವರಿಂದ ಇಡೀ ವಂಶವನ್ನೇ ನಾಶಮಾಡುತ್ತವೆ ಎಂಬ ಸಂದೇಶವನ್ನು ಸಾರುತ್ತವೆ
ನಮ್ಮವರೊಳಗಿನ ದ್ವೇಷಾಸೂಯೆಗಳು ನಮ್ಮ ಮನವನ್ನೂ ಮನೆಯನ್ನೂ ನಾಶಪಡಿಸುತ್ತವೆಎಂಬುದಕ್ಕೆಮಹಾಭಾರತಒಂದು ನಿದರ್ಶನವಾಗಿದೆ ದುರ್ಯೋಧನನ ಹಠದಿಂದ ಕೃಷ್ಣಸಂಧಾನವು ಮುರಿದುಬೀಳುತ್ತದೆ. ಯುದ್ಧ ಅನಿವಾರ್ಯವಾದಾಗ ಧರ್ಮಪಕ್ಷಪಾತಿಯಾದ ಕೃಷ್ಣನು ಭೇದತಂತ್ರವನ್ನು ಬಳಸಿ ಕರ್ಣನಿಗೆ ಜನ್ಮರಹಸ್ಯವನ್ನು ತಿಳಿಸುತ್ತಾನೆ. ಸಾಮಾನ್ಯನಿಗೆ ಅತಿಯಾದ ಸಂತೋಷವನ್ನು ನೀಡಬಹುದಾದ ಸಂಗತಿ, ಅಸಾಮಾನ್ಯನೂ ಶೌರ್ಯಕ್ಕೆ, ದಾನಕ್ಕೆ, ಉದಾತ್ತತೆಗೆ, ಕರುಣೆಗೆ ಹೆಸರಾಗಿದ್ದ ಕರ್ಣನಿಗೆ ಅತೀವವಾದ ಸಂಕಟವನ್ನು ಉಂಟುಮಾಡುತ್ತದೆ. ಅವನ ಸ್ವಾಮಿನಿಷ್ಠೆಯ ಮುಂದೆ ಶ್ರೀಕೃಷ್ಣನೊಡ್ಡಿದ ಪ್ರಲೋಭನೆ ವ್ಯರ್ಥವಾಗುತ್ತದೆ.

ಪ್ರಶ್ನೆಗಳು :
1. ಮೇಲಿನ ವಾಕ್ಯವೃಂದದಲ್ಲಿ ಇರುವ ಕನ್ನಡ ಕವಿಗಳ ಹೆಸರನ್ನು ಬರೆಯಿರಿ.
2. ಕೃಷ್ಣನು ಕರ್ಣನಿಗೆ ಜನ್ಮರಹಸ್ಯವನ್ನು ಏಕೆ ತಿಳಿಸಿದನು?
3. ಕೃಷ್ಣನ ತಂತ್ರ ಏಕೆ ವ್ಯರ್ಥವಾಯಿತು?
4. ಮಹಾಕಾವ್ಯಗಳು ಯಾವ ಸಂದೇಶವನ್ನು ಸಾರುತ್ತವೆ?
5.ಮೇಲಿನ ವಾಕ್ಯವೃಂದದಲ್ಲಿ ಇರುವ ಯಾವುದಾದರೂ ನಾಲ್ಕು ಆಗಮ ಸಂಧಿಯನ್ನು ಬಿಡಿಸಿ ಬರೆಯಿರಿ.

*************************************************************************************************

ಪಂಡಿತಾ ರಮಾಬಾಯಿ ಸರಸ್ವತಿಯವರು ಮಹಿಳೆಯರ ಸಾಮಾಜಿಕ, ಆರ್ಥಿಕ ಉನ್ನತಿಗಾಗಿ ದುಡಿದವರು. ಇವರ ತಂದೆ ಅನಂತಶಾಸ್ತ್ರಿ ಡೋಂಗ್ರೆ ಮತ್ತು ತಾಯಿ ಲಕ್ಷ್ಮೀಬಾಯಿ ದೇಶ ಪ್ರವಾಸ ಮಾಡುತ್ತಿದ್ದಾಗ ತಲೆದೋರಿದ ಭೀಕರ ಬರಗಾಲದಿಂದ ನಿಧನರಾದರು. ಗಂಡ ಬಿಪಿನ್ ಬಿಹಾರಿ ದಾಸ್ ಕಾಲರಕ್ಕೆ ತುತ್ತಾಗಿಮರಣ ಹೊಂದಿದರು. ನಂತರ ರಮಾಬಾಯಿ ಅವರು ವಿದ್ಯಾಭ್ಯಾಸ ಮುಂದುವರಿಸಿ ಸಮಾಜ ಸೇವೆಗೆ ತನ್ನನ್ನು ಅಣಿಗೊಳಿಸಬೇಕೆಂದು ನಿರ್ಧರಿಸಿ ಪುಣೆಗೆ ಬಂದರು. ಪುಣೆಯಲ್ಲಿಆರ್ಯ ಮಹಿಳಾ ಸಮಾಜಸ್ಥಾಪಿಸಿದರು. ಶಿಕ್ಷಣ ಪಡೆದು ಜ್ಞಾನವನ್ನು ಮತ್ತು ಆತ್ಮಸ್ಥೈರ್ಯವನ್ನು ಗಳಿಸಿ ಸ್ವಾವಲಂಬಿಗಳಾಗಿ ಬದುಕುವಂತೆ ಹೆಣ್ಣು ಮಕ್ಕಳನ್ನು, ಬಾಲ ವಿಧವೆಯರನ್ನು ರಮಾಬಾಯಿ ಪ್ರೋತ್ಸಾಹಿಸಿದರು. ಇದಕ್ಕೆ ಪೂರಕವಾಗುವಂತೆಸ್ತ್ರೀ ಧರ್ಮ ನೀತಿಎನ್ನುವ ಪುಸ್ತಕವನ್ನು ಪ್ರಕಟಿಸಿದರು. ಹಂಟರ್ ಆಯೋಗದ ಎದುರು ಹಾಜರಾದ ರಮಾಬಾಯಿ ಭಾರತದಲ್ಲಿ ಮಹಿಳೆಯರಿಗೆ ಶಿಕ್ಷಣದ ಆವಶ್ಯಕತೆಯ ಕುರಿತು ಸಮರ್ಥವಾದ ರೀತಿಯಲ್ಲಿ ವಾದ ಮಂಡಿಸಿದರು. ಇದು ಇಂಗ್ಲೆಂಡಿನ ರಾಣಿಯ ಗಮನಕ್ಕೆ ಬರುವ ಮೂಲಕ ಭಾರತದಲ್ಲಿ ಮಹಿಳೆಯರ ಪಾಲಿಗೆ ಶಿಕ್ಷಣ, ವೈದ್ಯಕೀಯ ಸೇವೆ ಮುಂತಾದ ಸವಲತ್ತುಗಳು ದೊರೆಯುವಂತಾಯಿತು.

ಪ್ರಶ್ನೆಗಳು :
1. ರಮಾಬಾಯಿ ಸರಸ್ವತಿಯವರು ಪುಣೆಗೆ ಏಕೆ ಬಂದರು?
2. ರಮಾಬಾಯಿ ಸರಸ್ವತಿಯವರ ತಂದೆ ತಾಯಿ ಮತ್ತು ಪತಿಯಸಾವಿಗೆ ಕಾರಣವೇನು?
3. ರಮಾಬಾಯಿ ಸರಸ್ವತಿಯವರುಸ್ತ್ರೀ ಧರ್ಮ ನೀತಿಎನ್ನುವಪುಸ್ತಕವನ್ನು ಏಕೆ ಪ್ರಕಟಿಸಿದರು.?
4.ಭಾರತದ ಮಹಿಳೆಯರಿಗೆ ಶಿಕ್ಷಣ, ವೈದ್ಯಕೀಯ ಸೇವೆ ಮುಂತಾದ ಸವಲತ್ತುಗಳು ದೊರೆಯುವಂತಾದುದು ಹೇಗೆ?

*************************************************************************************************

ಪಾಂಚಾಲ ದೇಶದ ಅರಸು ದ್ರುಪದರಾಜ ಹಾಗೂ ಪಾಂಡವರು ಕೌರವರಿಗೆ ಶಸ್ತ್ರಾಭ್ಯಾಸವನ್ನು ಕಲಿಸಿದ ಗುರುಗಳಾದ ದ್ರೋಣಾಚಾರ್ಯರು ಒಂದೇ ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡಿದರು. ಸಹಪಾಠಿಗಳಾಗಿದ್ದ ಇಬ್ಬರ ನಡುವೆ ಗಾಢವಾದ ಸ್ನೇಹ ಬೆಳೆದಿತ್ತು. ವಿದ್ಯಾಭ್ಯಾಸ ಮುಗಿಸಿ ಪಾಂಚಾಲ ದೇಶಕ್ಕೆ ದೊರೆಯಾಗಿ ತಾನು ನೇಮಕವಾದಾಗ ಅರ್ಧ ರಾಜ್ಯವನ್ನು ಸಖನಾದ ದ್ರೋಣನಿಗೆ ಕೊಡುವುದಾಗಿ ಆಶ್ವಾಸನೆ ನೀಡಿದನು. ಈರ್ವರೂ ವಿದ್ಯಾಭ್ಯಾಸ ಮುಗಿಸಿ ತಮ್ಮ ತಮ್ಮ ಗೃಹಗಳಿಗೆ ಹಿಂದಿರುಗಿದರು. ಬಡತನದಿಂದ ಸಂಸಾರ ಭಾರವನ್ನು ತೂಗಿಸುವುದು ದ್ರೋಣಾಚಾರ್ಯರಿಗೆ ಕಷ್ಟವಾಗುವುದು. ದ್ರುಪದನು ರಾಜ್ಯಭಾರವನ್ನು ವಹಿಸಿಕೊಂಡ ಮೇಲೆ ಗೆಳೆಯನನ್ನು ನೋಡಿ ಒಂದಿಷ್ಟು ಸಹಾಯವನ್ನು ಪಡೆಯಲು ದ್ರೋಣಾಚಾರ್ಯರು ಪಾಂಚಾಲ ದೇಶಕ್ಕೆ ಹೋಗುವರು. ಚಕ್ರವರ್ತಿಯಾಗಿದ್ದ ದ್ರುಪದನು ಅಧಿಕಾರ, ಅಂತಸ್ತು, ಐಶ್ವರ್ಯದ ಮದದಿಂದ ಆಪ್ತಮಿತ್ರನಾದ ದ್ರೋಣಚಾರ್ಯರಿಗೆ ಅವಮಾನವನ್ನು ಮಾಡುವನು.

ಪ್ರಶ್ನೆಗಳು :
1. ಮೇಲಿನ ವಾಕ್ಯವೃಂದದಲ್ಲಿ ಸ್ನೇಹಿತ ಮತ್ತು ಭೂಪಾಲ ಎಂಬ ಅರ್ಥಬರುವಪದಗಳನ್ನು ಆರಿಸಿ ಬರೆಯಿರಿ.
2. ದ್ರೋಣಾಚಾರ್ಯರು ದ್ರುಪದನ ಆಸ್ಥಾನಕ್ಕೆ ಏಕೆ ಹೋದರು?
3. ಮೇಲಿನ ವಾಕ್ಯವೃಂದಲ್ಲಿ ಬಂದಿರುವ ಆಗಮ ಮತ್ತು ಸವರ್ಣದೀರ್ಘಸಂಧಿಯಪದಗಳನ್ನು ಆರಿಸಿ ಬಿಡಿಸಿ ಬರೆಯಿರಿ.
4. ದ್ರೋಣಾಚಾರ್ಯರು ಶಸ್ತ್ರಾಭ್ಯಾಸವನ್ನು ಯಾರಿಗೆ ಮಾಡಿಸಿದರು?

*************************************************************************************************

 ಬಸಯ್ಯ ಕಡು ಬಡತನದ ಯುವಕ. ರೈತನಾಗಬೇಕೆಂಬ ಬಯಕೆ. ತಂದೆಯಿಂದ ಬಂದ ಎರಡು ಎಕರೆ ಭೂಮಿಯಿತ್ತು. ಅದು ಬಂಜರು ಗುಡ್ಡಗಳಿಂದ ಕೂಡಿದ ಭೂಮಿ. ನೀರಾವರಿ ಸೌಲಭ್ಯವಿಲ್ಲ. ಆದರೂ ಸಾಧಿಸುವ ಛಲವಿತ್ತು. ತನ್ನ ಭೂಮಿಯಲ್ಲಿದ್ದ ಗಿಡಗಂಟೆಗಳನ್ನು ತೆಗೆದ. ಅಲ್ಲಲ್ಲಿ ಇದ್ದ ಸಣ್ಣ ಪುಟ್ಟ ಬಂಡೆಗಲ್ಲುಗಳನ್ನು ಒಡೆಸಿ ಹೊರ ಹಾಕಿದ. ನೇಗಿಲಿನಿಂದ ಉಳುಮೆ ಮಾಡಿದ. ಕೊಟ್ಟಿಗೆ ಗೊಬ್ಬರ ಹಾಕಿ ಭೂಮಿಯನ್ನು ಹದ ಮಾಡಿದನು. 

ಮಳೆಗಾಲದಲ್ಲಿ ತನ್ನ ಭೂಮಿಯ ಪಕ್ಕದಲ್ಲಿ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಕಂಡನು. ಸರ್ಕಾರದಿಂದ ಹಣ ಸಹಾಯ ಪಡೆದು ಹೊಂಡ ತೆಗೆಸಿದ. ಮಳೆ ನೀರನ್ನು ಸಂಗ್ರಹಿಸಿದ. ಕೃಷಿ ಅಧಿಕಾರಿಗಳ ಜೊತೆ ಚರ್ಚಿಸಿದ. ಸಂಗ್ರಹಿಸಿದ ಮಳೆ ನೀರಿಗೆ ಹನಿ ನೀರಾವರಿ ಅಳವಡಿಸಿದನು. ವಿವಿಧ ಬೆಳೆ ಪದ್ಧತಿ ಅಳವಡಿಸಿಕೊಂಡನು. ದಾಳಿಂಬೆ, ಸಪೋಟ, ತೆಂಗು, ಹೂ ಬೆಳೆಗಳನ್ನು ಬೆಳೆದ. ಅಧಿಕ ಇಳುವರಿ ಪಡೆದನು. ಕೈತುಂಬ ಹಣ ಸಂಪಾದಿಸಿದನು. ಸುತ್ತಮುತ್ತಲಿನ ರೈತರು ಇವನ ಸಾಹಸ ಕಂಡು ಬೆರಗಾದರು. ಯುವಕನ ಸಾಧನೆ ಕಂಡು ಸರ್ಕಾರ ‘ಕೃಷಿ ಪಂಡಿತ’ ಪ್ರಶಸ್ತಿ ನೀಡಿ ಗೌರವಿಸಿತು.

ಪ್ರಶ್ನೆಗಳು:
1. ಬಸಯ್ಯನಿಗೆ ದೊರೆತ ಪ್ರಶಸ್ತಿ ಯಾವುದು?
2. ಈ ಕಥೆಯಿಂದ ನೀನು ಕಲಿತ ಪಾಠವೇನು?        

*************************************************************************************************

ಒಂದೂರಿನಲ್ಲಿ ಸದಾಶಿವನೆಂಬ ವ್ಯಾಪಾರಿಯಿದ್ದ. ಆತನಿಗೆ ರಾಮ, ಶ್ಯಾಮ, ಸೋಮರೆಂಬ ಮೂವರು ಗಂಡು ಮಕ್ಕಳಿದ್ದರು. ರಾಮ, ಶ್ಯಾಮರು ವಿದ್ಯಾವಂತರಾಗಿ, ವ್ಯಾಪಾರದಲ್ಲಿ ತಂದೆಗೆ ಸಹಾಯ ಮಾಡುತ್ತಿದ್ದರು. ಸೋಮ ಮಾತ್ರ ಸೋಮಾರಿಯಾಗಿದ್ದ. ಸದಾಶಿವ ಮೂರು ಮಕ್ಕಳಿಗೂ ಮದುವೆ ಮಾಡಿ, ಆಸ್ತಿಯನ್ನು ಸಮಪಾಲು ಮಾಡಿದ. ರಾಮ, ಶ್ಯಾಮರು ಆಸ್ತಿಯನ್ನು ವ್ಯಾಪಾರಕ್ಕೆ ವಿನಿಯೋಗಿಸಿ, ಶ್ರೀಮಂತರಾದರು. ಸೋಮ ಏನೂ ಕೆಲಸ ಮಾಡದೆ, ದಿನವೂ ಕೂತು ಉಣ್ಣುತ್ತಾ ತನ್ನ ಆಸ್ತಿಯನ್ನು ಕಳೆದುಕೊಂಡ. ಕೂತು ಉಂಡರೆ ಕುಡಿಕೆ ಹೊನ್ನು ಸಾಲದು ಎಂಬ ಗಾದೆಮಾತು ಸೋಮನಿಗೆ ಅರ್ಥವಾಯಿತು. 

 ಪ್ರಶ್ನೆಗಳು:
1. ಸದಾಶಿವನಿಗೆ ಎಷ್ಟು ಮಕ್ಕಳಿದ್ದರು?
2. ಸೋಮ ಹೇಗೆ ತನ್ನ ಆಸ್ತಿಯನ್ನು ಕಳೆದುಕೊಂಡ?
3. ಈ ಕಥೆಗೆ ಒಂದು ಶೀರ್ಷಿಕೆ (ಹೆಸರು) ಬರೆಯಿರಿ.

*************************************************************************************************

ವಿಶ್ವೇಶ್ವರಯ್ಯ ಅವರು ಕ್ರಿಸ್ತ ಶಕ 1860 ಸೆಪ್ಟೆಂಬರ್ 15 ರಂದು ಶ್ರೀನಿವಾಸಶಾಸ್ತ್ರಿ ಮತ್ತು ವೆಂಕಟಲಕ್ಷ್ಮಮ್ಮ ಅವರ ಎರಡನೆಯ ಮಗನಾಗಿ ಜನಿಸಿದರು. ಇವರ ಪೂರ್ವಜರು ಮೂಲತಃ ಕರ್ನೂಲು ಜಿಲ್ಲೆ ಗಿಡ್ಡಲೂರು ತಾಲೂಕಿನ `ಮೋಕ್ಷಗೊಂಡಂ’ ಅಗ್ರಹಾರಕ್ಕೆ ಸೇರಿದವರು. ಕಾರಣಾಂತರದಿಂದ ಕರ್ನಾಟಕಕ್ಕೆ ವಲಸೆ ಬಂದು ಚಿಕ್ಕಬಳ್ಳಾಪುರ ಸಮೀಪದಲ್ಲಿರುವ ಮುದ್ದೇನಹಳ್ಳಿಯಲ್ಲಿ ನೆಲೆಸಿದರು. ವೆಂಕಟಲಕ್ಷ್ಮಮ್ಮ ಅವರಿಗೆ ಮಕ್ಕಳು ಹೆಚ್ಚು ಓದಿ ದೊಡ್ಡ ವ್ಯಕ್ತಿಗಳಾಗಬೇಕೆಂಬ ಹಂಬಲವಿತ್ತು. ಅದಕ್ಕಾಗಿ ಸಂಸಾರವನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರಿಸಿದರು. ಓದಿನಲ್ಲಿ ಕ್ರಮನಿಷ್ಠರಾಗಿದ್ದ ವಿಶ್ವೇಶ್ವರಯ್ಯ ಅವರು ಜೀವನದಲ್ಲಿ ಉನ್ನತವಾದುದನ್ನು ಸಾಧಿಸಬೇಕೆಂಬ ದೃಢನಿರ್ಧಾರ ಹೊಂದಿದ್ದರು. ಅದಕ್ಕೆ ತಕ್ಕನಾದ ಪ್ರತಿಭೆ, ಮನೋಸ್ಥೈರ್ಯ ಅವರಲ್ಲಿತ್ತು. ಅಂದಿನ ಮೈಸೂರು ದಿವಾನರಾಗಿದ್ದ ಸಿ. ರಂಗಚಾರ್ಲುರವರು ನೀಡಿದ ವಿದ್ಯಾರ್ಥಿ ವೇತನ ಸೌಲಭ್ಯವನ್ನು ಬಳಸಿಕೊಂಡು ಪೂನಾದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಡಿಪ್ಲೊಮಾ ಶಿಕ್ಷಣವನ್ನು ಪ್ರಥಮ ಸ್ಥಾನದಲ್ಲಿ ಪಡೆದು ಜೇಮ್ಸ್ ಬಕ್ರ್ಲಿ ಬಹುಮಾನಕ್ಕೂ ಪಾತ್ರರಾದರು. ವಿಶ್ವೇಶ್ವರಯ್ಯ ಅವರು ಪುಟಿಯುವ ಚೈತನ್ಯ, ನಾಳೆ ಮಾಡುವುದನ್ನು ಇಂದೇ ಮಾಡು, ಇಂದು ಮಾಡುವುದನ್ನು ಈಗಲೇ ಮಾಡಬೇಕೆಂಬ ತುಡಿತ ಹೊಂದಿದ್ದರಿಂದ ಅವರು ಉನ್ನತ ಸಾಧನೆ ಮಾಡಲು ಕಾರಣವಾಯಿತು. 

ಪ್ರಶ್ನೆಗಳು: 
 1. ವಿಶ್ವೇಶ್ವರಯ್ಯರವರ ತಂದೆ, ತಾಯಿಯ ಹೆಸರೇನು?
2. ವೆಂಕಟಲಕ್ಷ್ಮಮ್ಮರವರು ಮುದೇನಹಳ್ಳಿಯಿಂದ ಚಿಕ್ಕಾಬಳ್ಳಾಪುರಕ್ಕೆ ಸ್ಥಳಾಂತರಗೊಳ್ಳಲು        ಕಾರಣವೇನು?
 3. ವಿಶ್ವೇಶ್ವರಯ್ಯರವರು ಉನ್ನತ ಸಾಧನೆ ಮಾಡಲು ಕಾರಣಗಳಾವುವು?
 4. ವಿಶ್ವೇಶ್ವರಯ್ಯರವರು ಯಾವ ಬಹುಮಾನ ಪಡೆದಿದ್ದರು?        
*************************************************************************************************

ಒಂದು ಅಂಗಡಿಯಲ್ಲಿ ಅನೇಕ ಇಲಿಗಳಿದ್ದವು. ಅವು ಅಂಗಡಿಯಲ್ಲಿರುವ ದವಸ ಧಾನ್ಯಗಳನ್ನು ತಿಂದು ಹಾಕುತ್ತಿದ್ದವು. ಪರಿಣಾಮವಾಗಿ ಅಂಗಡಿಯ ಯಜಮಾನನಿಗೆ ನಷ್ಟವಾಗುತ್ತಿತ್ತು. ಇಲಿಗಳ ಕಾಟವನ್ನು ತಡೆಗಟ್ಟಲು ಆತ ಒಂದು ಉಪಾಯವನ್ನು ಮಾಡಿದ. ಒಂದು ಬೆಕ್ಕನ್ನು ತಂದು ಅಂಗಡಿಯಲ್ಲಿರಿಸಿದ. ಬೆಕ್ಕು ದಿನವೂ ಇಲಿಗಳನ್ನು ಹಿಡಿದು ತಿನ್ನಲಾರಂಭಿಸಿತು. ಈಗ ಇಲಿಗಳಿಗೆ ಯೋಚನೆಯಾಗತೊಡಗಿತು. ಅದಕ್ಕೆ ಪರಿಹಾರ ಹುಡುಕುವ ಸಲುವಾಗಿ ಇಲಿಗಳೆಲ್ಲ ಸಭೆ ಸೇರಿದವು. ಒಂದು ಇಲಿಯು ‘ಬೆಕ್ಕಿನ ಕತ್ತಿಗೆ ಒಂದು ಗಂಟೆಯನ್ನು ಕಟ್ಟೋಣ. ಬೆಕ್ಕು ನಮ್ಮನ್ನು ಹಿಡಿಯಲು ಬಂದಾಗ ಗಂಟೆಯ ಶಬ್ದವಾಗುತ್ತದೆ. ಆಗ ನಾವು ಓಡಿಹೋಗಬಹುದು’ ಎಂದು ಸಲಹೆಯನ್ನು ನೀಡಿತು. ಈ ಸಲಹೆಯನ್ನು ಕೇಳಿದ ಇಲಿಗಳೆಲ್ಲ ಪರಿಹಾರ ಸಿಕ್ಕಿತೆಂಬ ಸಂಭ್ರಮದಲ್ಲಿ ಕುಣಿದವು. ಆಗ ಒಂದು ವಯಸ್ಸಾದ ಇಲಿಯು `ಮೂರ್ಖರೇ, ಸುಮ್ಮನಿರಿ, ಬೆಕ್ಕಿಗೆ ಯಾರು ಗಂಟೆಯನ್ನು ಕಟ್ಟುವವರು ಹೇಳಿ’ ಎಂದಿತು ಆಗ ಇಲಿಗಳೆಲ್ಲ ಸುಮ್ಮನಾದವು.

ಪ್ರಶ್ನೆಗಳು:

1.  ಇಲಿಗಳನ್ನು ಓಡಿಸಲು ಅಂಗಡಿಯ ಯಜಮಾನ ಯಾವ ಉಪಾಯವನ್ನು ಮಾಡಿದನು?
2.  ಇಲಿಗಳು ಕುಣಿದಾಡಲು ಕಾರಣವೇನು?
3.  ಈ ಕಥೆಗೆ ಒಂದು ಶೀರ್ಷಿಕೆ ಕೊಡಿ.

*************************************************************************************************

ಒಂದು ಕಾಡಿನಲ್ಲಿ ಮಾಯಾಮೃಗ ಎಂಬ ಪ್ರಾಣಿಯಿತ್ತು. ಇದು ದಿನವೂ ಕಾಡಿನಲ್ಲಿರುವ ಇತರ ಪ್ರಾಣಿಗಳನ್ನು ತನ್ನ ಮನಬಂದಂತೆ ಬೇಟೆಯಾಡಿ ತಿಂದು ಮುಗಿಸುತ್ತಿತ್ತು. ಆಗ ನರಿಯೊಂದು ಈ ಮಾಯಾಮೃಗಕ್ಕೆ ಬುದ್ಧಿ ಕಲಿಸಲು ನಿರ್ಧರಿಸಿ, ಕೂಗಿ ಕರೆಯಿತು. ನಿದ್ರಿಸುತ್ತಿದ್ದ ಆ ಪ್ರಾಣಿ ಎದ್ದು ಬಂದು ನರಿಯನ್ನು ಹೆದರಿಸಿತು. ಆದರೆ ನರಿಯು ಧೈರ್ಯಗೆಡದೆ, ಜಾಣ್ಮೆಯಿಂದ ಅದನ್ನು ಕೊಂದು ಹಾಕಿತು. ಇದನ್ನು ಕಂಡ ಕಾಡಿನ ಪ್ರಾಣಿಗಳೆಲ್ಲಾ ಸಂತಸದಿಂದ ಕುಣಿದಾಡಿದವು. ಸಿಂಹರಾಯನು ನರಿಯ ಸಾಹಸವನ್ನು ಮೆಚ್ಚಿ ಪ್ರಧಾನಮಂತ್ರಿ ಪದವಿಯನ್ನು ನೀಡಿದನು.

ಪ್ರಶ್ನೆಗಳು: 
 1. ಕಾಡಿನಲ್ಲಿ ಮನಬಂದಂತೆ ಬೇಟೆಯಾಡುತ್ತಿದ್ದ ಪ್ರಾಣಿ ಯಾವುದು? 
2. ಮಾಯಾಮೃಗವನ್ನು ಕೊಂದವರು ಯಾರು? 
3. ಸಿಂಹರಾಯನು ನರಿಗೆ ಯಾವ ಪದವಿಯನ್ನು ನೀಡಿದನು? 

*************************************************************************************************


8 comments:

  1. ಉಪಯುಕ್ತ ನಿಜವಾಗಲೂ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಸಂಪನ್ಮೂಲವಾಗಿದೆ. ಇದನ್ನು ರಚಿಸಿ ಕಾಲಕಾಲಕ್ಕೆ ಅಭಿವೃದ್ಧಿ ಪಡಿಸುತ್ತಿರುವ ತಮಗೆ ಅನಂತ ಅನಂತ ಧನ್ಯವಾದಗಳು.

    ReplyDelete
  2. ದಯವಿಟ್ಟು ಕೆಲವೊಂದು ಪದ್ಯಾಂಶಗಳನ್ನೂ ಸೇರಿಸಿ.

    ReplyDelete
  3. ೯ ಮತ್ತು ೧೦ನೇ ತರಗತಿಯ ಪಠ್ಯಪೋಷಕ ಪಾಠಗಳು ಎಲ್ಲು ಸಿಗುತ್ತಿಲ್ಲ ಅದನ್ನು ಇಲ್ಲಿ ಸೇರಿಸಿದರೆ ಅನುಕೂಲವಾಗುತ್ತದೆ.

    ReplyDelete
  4. This is really cool webpage

    ReplyDelete
  5. ಉಪಯುಕ್ತವಾಗಿದೆ

    ReplyDelete
  6. ಚೆನ್ನಾಗಿಲ್ಲ

    ReplyDelete
  7. Very nice and use full

    ReplyDelete