ವಿಮರ್ಶೆ

ವಿಮರ್ಶೆ ಒಂದು ಬೌದ್ಧಿಕ ಕ್ರಿಯೆ. ಯಾವುದೇ ಕೃತಿಯನ್ನು ತೂಗಿನೋಡಿ ಮೌಲ್ಯ ನಿರ್ಧರಿಸುವ ಸಾಮಥ್ರ್ಯ ಅಥವಾ ಕಲೆ (ಕ್ರಿಟಿಸಿಸಮ್). ಈ ಪದ ಗ್ರೀಕ್ ಮೂಲದ ಕ್ರಿನೈನ್‍ದಿಂದ ಬಂದದ್ದು. ಅಂದರೆ ಬೇರ್ಪಡಿಸು, ವಿವೇಕಿಸು, ವಿಶ್ಲೇಷಿಸು ಎಂದರ್ಥ. ಕ್ರಿಯಾಶೀಲ ಬರೆಹಗಾರರು, ಪ್ರಾರಂಭಿಕ ಬರೆಹಗಾರರು, ವೃತ್ತಿಶೀಲ ವಿಮರ್ಶಕರು ಎಲ್ಲರ ವಿಶ್ಲೇಷಣೆಯನ್ನು ವಿಮರ್ಶೆಯೆಂದೇ ಕರೆಯಲಾಗುತ್ತದೆ. ಇಂದು ಬಳಸುತ್ತಿರುವ ವಿಮರ್ಶೆ ಎಂಬ ಪದ ಇಂಗ್ಲಿಷ್‍ನ ಕ್ರಿಟಿಸಿಸಂ ಪದಕ್ಕೆ ಸಂವಾದಿ.
ಸ್ವರೂಪ ಮತ್ತು ಲಕ್ಷಣ: ವಿಮರ್ಶೆಯ ಬರೆಹಗಳು ನಾನಾ ರೀತಿಯವು. ಅವು ಪದ್ಯ ಅಥವಾ ಗದ್ಯ ರೂಪದಲ್ಲಿರಬಹುದು. ಸಣ್ಣ ಪ್ರಬಂಧಗಳೋ ಗ್ರಂಥರೂಪವೋ ಇರಬಹುದು. ಆತ್ಮಚರಿತೆಯೋ ಯಾವುದಾದರೂ ಕೃತಿಯನ್ನು ಕುರಿತ ಟೀಕೆಯೋ ವ್ಯಾಖ್ಯಾನವೋ ಭಾಷ್ಯವೋ ಅರ್ಥವಿವರಣೆಯೋ ಕಾವ್ಯಮೀಮಾಂಸೆಯೋ ಆಗಿರಬಹುದು. ಸಾಹಿತ್ಯ ಸ್ವರೂಪವನ್ನು ಕುರಿತು ಬರೆದ ಅಭಿಪ್ರಾಯವೋ ಮೌಲ್ಯಮಾಪನವೋ ಅಥವಾ ಕೃತಿಸಂಪಾದನೆಯ ಮುನ್ನುಡಿ ರೂಪವೋ ಆಗಿರಬಹುದು. ಪಾಶ್ಚಾತ್ಯರಲ್ಲಿ ವಿಮರ್ಶೆ ಎಂಬುದು ಸಾಹಿತ್ಯ ಮತ್ತು ಕಲಾಪ್ರಪಂಚವನ್ನು ಕುರಿತ ಯಾವುದೇ ಅಭಿಪ್ರಾಯ ಅಥವಾ ನಿರ್ಣಯ ಕಾರ್ಯವಾಗಿರುತ್ತದೆ. ಅಷ್ಟೇ ಅಲ್ಲ, ಯಾವುದೇ ಅಭಿಪ್ರಾಯ ಖಂಡನೆಯೂ ವಿಮರ್ಶೆಯಾಗ ಬಲ್ಲದು. ಉದಾಹರಣೆಗೆ ಕ್ರಾಮ್‍ವೆಲ್‍ಗಾಗಿ ವಿಕ್ಟರ್ ಹ್ಯೂಗೋ ಬರೆದ ಮುನ್ನುಡಿ ರೊಮ್ಯಾಂಟಿಕ್ ಕಲೆಯ ಕುರಿತ ವಿಮರ್ಶೆ ಆಗಿತ್ತು. ವಡ್ರ್ಸ್‍ವರ್ತ್‍ನ ಲಿರಿಕಲ್ ಬ್ಯಾಲೆಡ್ಸ್‍ನ ಸ್ವರೂಪ ಮತ್ತು ಅಗತ್ಯವನ್ನು ಕುರಿತ ಸಮರ್ಥನ ಲೇಖನ ಎ ಪ್ರಿಫೇಸ್ ಟು ದ ಲಿರಿಕಲ್ ಬ್ಯಾಲೆಡ್ಸ್ ಒಂದು ಕಾವ್ಯಪಂಥದ ವ್ಯಾಖ್ಯಾನವೇ ಆಯಿತು. ತನ್ನ ತೆರೆಸಾರ್ಯಾಕ್ವಿನ್ ಕೃತಿಯಲ್ಲಿ ಎಮಿಲಿ ಜೋಲಾ ನ್ಯಾಚುರಲಿಸಂ ಕುರಿತು ಉಪನ್ಯಾಸ ಕೊಟ್ಟದ್ದು-ಇವೆಲ್ಲವೂ ವಿಮರ್ಶೆಯ ಸ್ವರೂಪ ಯಾವತ್ತೂ ಭಿನ್ನರುಚಿ ಹಾಗೂ ಭಿನ್ನಸಾಧ್ಯತೆಗಳನ್ನೊಳಗೊಂಡದ್ದು ಎಂಬುದನ್ನು ಶ್ರುತಪಡಿಸಿವೆ. ಜಾರ್ಜ್‍ಬರ್ನಾಡ್ ಷಾ ತನ್ನ ನಾಟಕಗಳಿಗೆ ಕೊಡುವಷ್ಟೇ ಪ್ರಾಮುಖ್ಯವನ್ನು ಅದರ ದೀರ್ಘ ವಿವರಣಾತ್ಮಕ ಮುನ್ನುಡಿಗೂ ಕೊಟ್ಟಿದ್ದ. ಅವನ ಮ್ಯಾನ್ ಅಂಡ್ ಸೂಪರ್‍ಮ್ಯಾನ್ ಮತ್ತು ಮೇಜರ್ ಬಾರ್ಬರಾ ಕೃತಿಗಳಲ್ಲಿಯ ಪರಿಚಯ ಲೇಖನ ಇದಕ್ಕೆ ಸಾಕ್ಷಿ.
ಇದೆಲ್ಲದರಿಂದ ತಿಳಿದು ಬರುವ ಅಂಶವೆಂದರೆ, ಎಷ್ಟೋ ವೇಳೆ ಕೃತಿ ಮುಖ್ಯವಾಗಿರದೆ ಅದರ ಹಿನ್ನೆಲೆಯನ್ನು ರೂಪಿಸಿದ ಸಾಹಿತ್ಯಸ್ವರೂಪ, ಸಾಮಾಜಿಕ, ಧಾರ್ಮಿಕ ಹಿನ್ನೆಲೆ, ಬದುಕು ಮತ್ತು ಸಾಹಿತ್ಯಮಾರ್ಗಗಳು ವಿಮರ್ಶೆಯ ಸ್ವರೂಪವನ್ನು ನಿರ್ಣಯಿಸುತ್ತವೆ ಎಂಬುದು. ಅರಿಸ್ಟಾಟಲ್, ಲಾಂಜೀನಸ್, ಹೊರೇಸ್ ಮೊದಲಾದವರ ಕೃತಿವಿಮರ್ಶೆ, ಮುಂದೆ ಕಾವ್ಯಮೀಮಾಂಸೆಯ ಮೌಲ್ಯ ಗಳಿಸಿದವು. ಯಾವುದೇ ಕೃತಿಯ ಖಂಡನೆ, ಮಂಡನೆ, ಸಿದ್ಧಾಂತ, ತತ್ತ್ವಪ್ರತಿಪಾದನೆ-ಹೀಗೆ ಎಲ್ಲ ನಿಟ್ಟಿನಲ್ಲೂ ವಿಮರ್ಶೆ ಎಂಬುದು ವೈವಿಧ್ಯದಿಂದ ಕೂಡಿದ್ದು, ವ್ಯಾಖ್ಯಾನಿಸುವುದು ಅಷ್ಟು ಸುಲಭಸಾಧ್ಯವಲ್ಲ.
ಫ್ರಾನ್ಸ್, ಜರ್ಮನಿಯಂಥ ಕಡೆಗಳಲ್ಲಿ ಮೌಲಿಕ ಸಾಹಿತ್ಯ ಚಿಂತನೆ ವಿಮರ್ಶೆಯ ಲಕ್ಷಣವಾಗಿದ್ದರೆ, ಆಂಗ್ಲವಿಮರ್ಶಕರು ಪ್ರಾಯೋಗಿಕ ವಿಮರ್ಶೆಗೆ ಪ್ರಾಧಾನ್ಯ ಕೊಟ್ಟಿದ್ದಾರೆ. ಅಮೆರಿಕದ ವಿಮರ್ಶಾಕ್ರಮದಲ್ಲಿ ಕೃತಿವಿಶ್ಲೇಷಣೆ ಅಥವಾ ಕೃತಿ ವ್ಯಾಖ್ಯಾನ ಹೆಚ್ಚು ಪ್ರಾಶಸ್ತ್ಯಗಳಿಸಿದೆ. ಮ್ಯಾಥ್ಯೂ ಆರ್ನಾಲ್ಡ್, ಲೆಸ್ಲೀ ಸ್ಟೀವನ್, ಜಾನ್ ಮಾರ್ಲೇ ಮೊದಲಾದವರು ನೀಡಿರುವ ಸಾಹಿತ್ಯೋಪನ್ಯಾಸಗಳು ಉತ್ತಮ ವಿಮರ್ಶಾ ಸಿದ್ಧಾಂತಗಳಾಗಿ ಪ್ರತಿಪಾದಿತವಾಗಿರುವುದನ್ನು ಗಮನಿಸಬೇಕು. ಪೌರ್ವಾತ್ಯ, ಅದರಲ್ಲೂ ಮುಖ್ಯವಾಗಿ ಭಾರತೀಯ ಚೌಕಟ್ಟಿಗೆ ಬಂದರೆ, ಅಲ್ಲಿ ಕಾವ್ಯಮೀಮಾಂಸೆಗೆ ಮೊದಲಸ್ಥಾನ ಹಾಗೂ ಕೊನೆಯಸ್ಥಾನ. ಸಾಹಿತ್ಯ ವಿಮರ್ಶೆ ಇತ್ತೀಚಿನದು. ಅಧ್ಯಯನಗಳಿಂದ ತಿಳಿದು ಬರುವ ಸಂಗತಿಯೆಂದರೆ, ಸುಮಾರು 3ನೆಯ ಶತಮಾನದ ಭರತನಿಂದ ಮೊದಲುಗೊಂಡು ಹದಿನೈದನೆಯ ಶತಮಾನದ ವಿಶ್ವನಾಥನವರೆಗೂ ಸುಮಾರು ಸಾವಿರ ವರ್ಷಗಳ ಅವಧಿಯ ಇತಿಹಾಸದಲ್ಲಿ ಕಾಣಸಿಗುವವರು ಲಾಕ್ಷಣಿಕರು, ವ್ಯಾಖ್ಯಾನಕಾರರು, ಟೀಕಾಕಾರರು ಹಾಗೂ ಮೀಮಾಂಸಕರೇ ಹೊರತು ಸಾಹಿತ್ಯ ವಿಶ್ಲೇಷಕರಲ್ಲ. ಎಷ್ಟೋ ವೇಳೆ ಟೀಕೆಯ ಅಥವಾ ವ್ಯಾಖ್ಯಾನ ಸ್ವರೂಪದ ಶ್ಲೋಕ ಹಾಗೂ ಪದ್ಯಭಾಗಗಳನ್ನು ಚರ್ಚಿಸಲಾಗಿದೆಯಾದರೂ ಅದು ಕೃತಿವಿಮರ್ಶೆ ಯಾಗಿಲ್ಲ. ಆದರೆ ಭಾರತೀಯ ಕಾವ್ಯಮೀಮಾಂಸೆ ಎಂಬ ಆಲೋಚನಾ ಕ್ರಮ ಅಥವಾ ಮಂಥನಕ್ರಿಯೆ ಶಿಸ್ತುಬದ್ಧವಾದ ಚಿಂತನೆಗೆ, ಸಿದ್ಧಾಂತ ತತ್ತ್ವಗಳಿಗೆ, ತಾರ್ಕಿಕಜ್ಞಾನಕ್ಕೆ ಒತ್ತುಕೊಟ್ಟಿದೆ.
ಬೆಳೆವಣಿಗೆ: ಕೃತಿರಚನೆಯನ್ನು ಅಭಿಜಾತ ಕಲೆಯೆಂದು ಭಾವಿಸುತ್ತಿದ್ದ ಪ್ರಾರಂಭದ ಕಾಲದಲ್ಲಿ ಪಾಶ್ಚಾತ್ಯರಲ್ಲೂ ಕಾವ್ಯಮೀಮಾಂಸೆಯೇ ಪ್ರಧಾನವಾಗಿತ್ತು. ಅರಿಸ್ಟಾಟಲ್, ಲಾಂಜೀನಸ್ ಬರೆಹಗಳನ್ನು ಗಮನಿಸಿದರೆ, ಅವರ ಸಾಹಿತ್ಯದ ಸ್ವರೂಪ ತತ್ತ್ವಪ್ರತಿಪಾದನೆಗಳಲ್ಲಿ ಪ್ರಧಾನವಾಗಿರುವುದು ತಿಳಿಯುತ್ತದೆ. ಆದರೆ 15ನೆಯ ಶತಮಾನದಿಂದ ಈಚೆಗೆ ರೆನೈಸಾನ್ಸ್ ಕಾಲಕ್ಕೆ ಕ್ರಮೇಣ ಮೀಮಾಂಸೆಯೊಂದಿಗೆ ವಿಮರ್ಶೆಯ ತತ್ತ್ವಗಳು ರೂಪುಗೊಂಡವು. 18-19ನೆಯ ಶತಮಾನಗಳಿಗೆ ಕಾಲಿಡುತ್ತಿದ್ದಂತೆ ಈ ಪರಿಕ್ರಮ ವಿಮರ್ಶಾತತ್ತ್ವಗಳ ಆಧಾರದಲ್ಲಿ ಕೃತಿಯನ್ನು ಒರೆಹಚ್ಚುವಲ್ಲಿಗೆ ಬಂದು ಮುಟ್ಟಿತು. 19ನೆಯ ಶತಮಾನದಿಂದೀಚೆಗೆ ರಮ್ಯ ಅಥವಾ ರೊಮ್ಯಾಂಟಿಕ್ ಯುಗದ ವಿಮರ್ಶಕರಾದ ಲೆಸಿಂಗ್, ವಡ್ರ್ಸ್‍ವರ್ತ್, ಕೋಲ್‍ರಿಜ್, ಹ್ಯೂಗೋ ಮೊದಲಾದವರು ಮೀಮಾಂಸೆಯೊಂದಿಗೆ ಸರಿಸಮವಾಗಿ ಹಾಗೂ ಸ್ಪಷ್ಟ ತತ್ತ್ವಗಳಿಗನುಗುಣವಾಗಿ ವಿಮರ್ಶಾತತ್ತ್ವಗಳನ್ನು ಪ್ರತಿಪಾದಿಸತೊಡಗಿದರು.
ಹೀಗೆ ನಿರ್ದಿಷ್ಟ ತತ್ತ್ವಗಳಡಿಯಲ್ಲಿ ಕೃತಿಗಳನ್ನು ಒರೆಹಚ್ಚುವ ಕ್ರಮದಲ್ಲೂ ಸ್ಪಷ್ಟವಾಗಿ ಬೆಳೆವಣಿಗೆಯ ಸ್ವರೂಪವನ್ನು ಗುರುತಿಸಬಹುದು. ಹಿಂದೆ ವಿಮರ್ಶೆಯನ್ನು ವಸ್ತುನಿಷ್ಠ ಮತ್ತು ವ್ಯಕ್ತಿನಿಷ್ಠ ಅಥವಾ ಆತ್ಮನಿಷ್ಠ ಎಂದು ಪ್ರಧಾನವಾಗಿ ಎರಡು ವರ್ಗಗಳಡಿಯಲ್ಲಿ ಗುರುತಿಸಲಾಗುತ್ತಿತ್ತು. ಆತ್ಮನಿಷ್ಠ ವಿಮರ್ಶೆಯನ್ನು ಮಹಾಕೃತಿಗಳಲ್ಲಿಯ ಚೈತನ್ಯವನ್ನು ಗ್ರಹಿಸುವ ಸಾಹಸಯಾತ್ರೆ ಎಂದೇ ವ್ಯಾಖ್ಯಾನಿಸಲಾಗುತ್ತಿತ್ತು. ಒಬ್ಬ ವಿಮರ್ಶಕ ತಾನು ಒಳಹೊಕ್ಕು ನೋಡುವ ಕೃತಿಯಲ್ಲಿ ತನ್ನ ಗ್ರಹಿಕೆಗೆ ನಿಲುಕಿದ ಅಂಶಗಳನ್ನು ಹಾಗೂ ಅದರಿಂದ ತನ್ನ ಮೇಲಾದ ಪ್ರಭಾವವನ್ನು ಓದುಗರೆದುರು ತೆರೆದಿಡುವ ಕ್ರಮವೇ ವ್ಯಕ್ತಿನಿಷ್ಠ ವಿಮರ್ಶೆಯೆನಿಸುತ್ತಿತ್ತು, ಬಹುತೇಕ ಪುಸ್ತಕ ವಿಮರ್ಶೆ ಈ ಕ್ರಮದಲ್ಲಿ ದಾಖಲಾಗುತ್ತಿತ್ತು. ವ್ಯಕ್ತಿನಿಷ್ಠ ವಿಮರ್ಶೆ ಒಂದು ಕೃತಿಯ ವಸ್ತು, ವಿಷಯ, ಪ್ರಮಾಣಗಳಿಗನುಗುಣವಾಗಿ ವಿಮರ್ಶಕ ಮೌಲ್ಯನಿರ್ಧಾರ ಮಾಡುತ್ತಿದ್ದ.
ಇಂದು ವಿಮರ್ಶೆಯ ದಾರಿ ಹಲವು ಕವಲುಗಳಾಗಿದೆ. ಆಧುನಿಕ ವಿಮರ್ಶಾ ಪ್ರಸ್ಥಾನಗಳೆಂದೇ ವಿದ್ವಾಂಸರು ಇದನ್ನು ಗ್ರಹಿಸಿದ್ದಾರೆ. ಕಾಲದಿಂದ ಕಾಲಕ್ಕೆ ವಿಮರ್ಶಾ ಪ್ರಸ್ಥಾನಗಳು ಬದಲಾಗುತ್ತವೆ. ಅದು ಸಮಕಾಲೀನ ದೃಷ್ಟಿ, ಧೋರಣೆಗಳಿಗನುಸಾರವಾಗಿ ವಿಮರ್ಶೆಯ ಸ್ವರೂಪ ಬದಲಾಗುವುದರ ಸಂಕೇತವಾಗಿದೆ. ಅವುಗಳಲ್ಲಿ ಪ್ರಧಾನ ಮಾರ್ಗಗಳನ್ನು ಸ್ಥೂಲವಾಗಿ ಹೀಗೆ ಗುರುತಿಸಬಹುದು: ಮನೋವೈಜ್ಞಾನಿಕ ವಿಮರ್ಶೆ (ಸೈಕೊಲಾಜಿಕಲ್ ಕ್ರಿಟಿಸಿಸಮ್), ಚಾರಿತ್ರಿಕ ವಿಮರ್ಶೆ (ಹಿಸ್ಟಾರಿಕಲ್ ಕ್ರಿಟಿಸಿಸಮ್), ಮಾಕ್ರ್ಸ್‍ವಾದಿ ವಿಮರ್ಶೆ (ಮಾಕ್ರ್ಸಿಸ್ಟ್ ಕ್ರಿಟಿಸಿಸಮ್), ಸ್ತ್ರೀನಿಷ್ಠ ವಿಮರ್ಶೆ (ಫೆಮಿನಿಸ್ಟ್ ಕ್ರಿಟಿಸಿಸಮ್), ಸ್ವರೂಪ ವಿಮರ್ಶೆ (ಜಾನರ್ ಕ್ರಿಟಿಸಿಸಮ್), ರೂಪನಿಷ್ಠ ವಿಮರ್ಶೆ (ಫಾರ್ಮಲಿಸಮ್), ವಾಚಕಕೇಂದ್ರಿತ ವಿಮರ್ಶೆ, ರಾಚನಿಕ ವಿಮರ್ಶೆ ಮುಂತಾದುವು.
ವ್ಯಾಖ್ಯಾನಗಳು: ವಿಮರ್ಶೆ ಈ ಮೇಲಿನ ಯಾವುದೇ ಕವಲಿಗೆ ಸಂಬಂಧಿಸಿರಬಹುದು. ಆದರೆ ಕೆಲವು ಲಕ್ಷಣಗಳಿರಬೇಕೆಂದು ವಿದ್ವಾಂಸರು ಒಂದಲ್ಲ ಒಂದು ರೀತಿಯಿಂದ ಪ್ರತಿಪಾದಿಸುತ್ತಲೇ ಬಂದಿದ್ದಾರೆ. ಟಿ.ಎಸ್.ಎಲಿಯಟ್‍ನ ಪ್ರಕಾರ ವಿಮರ್ಶೆ ಕಲಾಕೃತಿಗಳನ್ನು ಅರ್ಥೈಸಬೇಕು ಹಾಗೂ ಓದುಗನ ಅಭಿರುಚಿಯನ್ನು ತಿದ್ದಬೇಕು. ಎಫ್.ಆರ್.ಲೀವಿಸ್‍ನ ಪ್ರಕಾರ ಉನ್ನತವಾದ ನೈತಿಕ ಪ್ರಜ್ಞೆಯನ್ನು ನಿರೂಪಿಸಬೇಕು ಹಾಗೂ ಕೃತಿಯಲ್ಲಿಯ ಮೌಲ್ಯಗಳು ಬದುಕಿನ ಪರವಾಗಿವೆಯೇ ಎಂದು ನಿರೂಪಿಸಬೇಕು. ಮ್ಯಾಥ್ಯೂ ಆರ್ನಾಲ್ಡ್‍ನ ಪ್ರಕಾರ ಮಾನವ ಮೌಲ್ಯಗಳನ್ನು ಪ್ರತಿಪಾದಿಸುವಂಥದಾಗಿರಬೇಕು ಹಾಗೂ ಸಾಹಿತಿ ತನ್ನ ಕೃತಿಯಲ್ಲಿ ಅಭಿವ್ಯಂಜಿಸಿದ ಅನುಭವಗಳ ಮಟ್ಟವನ್ನು ಪರಿಶೀಲಿಸಿ ಮೌಲ್ಯನಿರ್ಧರಿಸಬೇಕು. 1941ರ ಅನಂತರ, ಅಮೆರಿಕದ ಕವಿ, ವಿಮರ್ಶಕ ಜಾನ್‍ಕ್ರೋ ರ್ಯಾನ್‍ಸಮ್ `ನವ್ಯವಿಮರ್ಶೆಯೆಂಬ (ನ್ಯೂ ಕ್ರಿಟಿಸಿಸಮ್) ಗ್ರಂಥವನ್ನು ಹೊರತರುವುದರ ಮೂಲಕ ವಿಮರ್ಶಾಕ್ಷೇತ್ರದಲ್ಲಿ ಹೊಸತೊಂದು ಹಂತವನ್ನು ರೂಪಿಸಿದ. ಅವನ ಹಾದಿಯಲ್ಲೇ ಬಂದ ಇತರ ಮಹತ್ತ್ವದ ವಿಮರ್ಶಕರಾದ ಕ್ಲಿಯಂತ್ ಬ್ರೂಕ್ಸ್, ರಾಬರ್ಟ್ ಪೆನ್ ವಾರನ್ ಮತ್ತು ರಾಬರ್ಟ್ ಹೇಲ್ಮನ್ ಮೂವರು ಒಟ್ಟಿಗೆ ರಚಿಸಿದ ಅಂಡರ್‍ಸ್ಟ್ಯಾಂಡಿಂಗ್ ಪೊಯೆಟ್ರಿ (ಕಾವ್ಯಾಸ್ವಾದ), ಅಂಡರ್‍ಸ್ಟ್ಯಾಂಡಿಂಗ್ ಫಿಕ್ಷನ್ (ಕಥನ ಸಾಹಿತ್ಯದ ಆಸ್ವಾದ) ಮತ್ತು ಅಂಡರ್‍ಸ್ಟ್ಯಾಂಡಿಂಗ್ ಡ್ರಾಮ (ನಾಟಕದ ಆಸ್ವಾದ) ಕೃತಿಗಳು ಒಂದು ಕೃತಿಯನ್ನು ಅಭ್ಯಸಿಸುವಾಗ ಅವುಗಳ ಶಿಲ್ಪ ಮತ್ತು ಬಂಧ ಕರ್ಷಣ (ಟೆನ್ಶನ್) ವ್ಯಂಗ್ಯ ಮತ್ತು ವಿರೋಧಾಭಾಸ (ಐರನಿ ಅಂಡ್ ಪ್ಯಾರಡಾಕ್ಸ್), ಆಂಗಿಕ ಸಂಜ್ಞೆ (ಲ್ಯಾಂಗ್ವೇಜ್ ಆ್ಯಸ್ ಗೆಶ್ಚರ್), ಭ್ರಮೆ (ಫ್ಯಾಲಸಿ) ಮುಂತಾದ ವಿಷಯಗಳನ್ನು ಗ್ರಹಿಸಿ ವಿಮರ್ಶಿಸಬೇಕೆಂದು ಪ್ರತಿಪಾದಿಸುತ್ತಾರೆ.
ನವ್ಯವಿಮರ್ಶೆ ಬ್ರಿಟಿಷ್ ಅಮೆರಿಕನ್ ರೂಪನಿಷ್ಠೆಯನ್ನು ಹೋಲುತ್ತದಾದರೂ ಕನ್ನಡ ಸಂದರ್ಭಕ್ಕೆ ಹೊಂದುವುದೆಂದು ವಿದ್ವಾಂಸರು ನಂಬುತ್ತಾರೆ. ಏಕೆಂದರೆ ರೂಪನಿಷ್ಠ ವಿಮರ್ಶೆಯನ್ನು ಈಗಾಗಲೇ ಭಾರತೀಯ ಕಾವ್ಯಮೀಮಾಂಸೆಯೂ ಎತ್ತಿಹಿಡಿದಿದೆ. ಈ ನಿಟ್ಟಿನಲ್ಲಿ ಎಂ.ಜಿ.ಕೃಷ್ಣಮೂರ್ತಿ, ಗಿರಡ್ಡಿ ಗೋವಿಂದರಾಜ, ಎಚ್.ಎಮ್.ಚನ್ನಯ್ಯ, ಯು.ಆರ್.ಅನಂತಮೂರ್ತಿ, ಗೋಪಾಲಕೃಷ್ಣ ಅಡಿಗ, ಕೀರ್ತಿನಾಥ ಕುರ್ತಕೋಟಿ, ಜಿ.ಎಸ್.ಆಮೂರ ಮೊದಲಾದವರಿಂದ ನವ್ಯವಿಮರ್ಶೆ ವಿಪುಲವಾಗಿಯೇ ಬೆಳೆದಿದೆ.
ಕೃತಿಗಳ ಮೇಲೆ ವಿಮರ್ಶೆಯ ಪ್ರಭಾವ: ಇದು ನಿಜಕ್ಕೂ ಬೆರಗುಗೊಳಿಸುವಂಥ ಹಾಗೂ ಗಂಭೀರವಾಗಿ ಚಿಂತಿಸಬೇಕಾದಂಥ ಸಂಗತಿ. ಕಾಲಕಾಲಕ್ಕೆ ಕೃತಿಗಳು ಹೆಚ್ಚು ಪಾಂಡಿತ್ಯಪೂರ್ಣವಾಗಿಯೂ ಸಮಾಜಮುಖಿಯಾಗಿಯೂ ವೈಚಾರಿಕವಾಗಿಯೂ ರೂಪುಗೊಳ್ಳುವುದಕ್ಕೆ ಹಾಗೂ ಹೊಸ ಹೊಸ ಚಿಂತನಾಕ್ರಮಗಳನ್ನು ರೂಢಿಸಿಕೊಳ್ಳುವುದಕ್ಕೆ ವಿಮರ್ಶೆ ತನ್ನದೇ ಆದ ರೀತಿಯಲ್ಲಿ ಪ್ರಭಾವ ಬೀರುತ್ತದೆ. ಫ್ರಾನ್ಸನ್ನೇ ಉದಾಹರಿಸುವುದಾದರೆ, 1500-1700 ಅವಧಿಯಲ್ಲಿ ಪ್ರತಿಭಾವಂತ ವಿಮರ್ಶಕರು “ನಾಟಕಕಾರರು ಕಾಲ, ಸ್ಥಳ ಮತ್ತು ಕ್ರಿಯೆಗಳನ್ನು ಪರಿಗಣಿಸಿ ನಿರ್ದಿಷ್ಟ ತತ್ತ್ವ ಹಾಗೂ ನಿಯಮಗಳನ್ನು ರೂಪಿಸಬೇಕು” ಎಂದು ಒತ್ತಾಯಿಸಿದರು. ಅದು ಅಂದಿನ ನಾಟಕಗಳ ರಚನೆಯ ಮೇಲೆ ಎಂಥ ಪ್ರಭಾವ ಬೀರಿತೆಂಬುದು ಇತಿಹಾಸ.
ಈ ದಿನಗಳಲ್ಲಿ ವಿಮರ್ಶಾ ಶೈಲಿ ವ್ಯಾಪಾರಕೇಂದ್ರಿತವಾದ ಆತಂಕಕಾರಿ ಮಜಲನ್ನೂ ಸೃಷ್ಟಿಸಿಕೊಂಡಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. “ಕಲೆ ಇಂಥ ನಿರ್ದಿಷ್ಟ ಮೌಲ್ಯಗಳನ್ನು ಪ್ರತಿಪಾದಿಸಬೇಕು” ಎಂದು ಒತ್ತಾಯಿಸುವುದನ್ನು ವಿಮರ್ಶೆ ಬಹುತೇಕ ಮಾಡುತ್ತಿಲ್ಲ. ಬಹಳ ವಿಮರ್ಶೆಗಳು ವ್ಯಕ್ತಿಕೇಂದ್ರಿತವೂ ಪತ್ರಿಕಾನೀತಿಯುಳ್ಳವೂ ಆಗಿವೆ. ಅಂದರೆ ಸಾರ್ವಜನಿಕರನ್ನು ಪ್ರಭಾವಿಸುವುದು, ಕೃತಿಗಳು ಮಾರಾಟವಾಗುವಂತೆ ವಿಮರ್ಶಿಸುವುದು ಅಥವಾ ಕಲಾಕೃತಿಯಾದಲ್ಲಿ ಅದರ ಪ್ರದರ್ಶನಕ್ಕೆ ಜನರು ಸೇರುವಂತೆ ಪ್ರಭಾವಿಸುವ ಕೆಲಸಮಾಡುವುದು ಬಹುತೇಕ ವಿಮರ್ಶೆಗಳ ಜಾಯಮಾನವಾಗಿದೆ. (ನೋಡಿ- ಕನ್ನಡದಲ್ಲಿ-ವಿಮರ್ಶನ-ಸಾಹಿತ್ಯ) (ಜಿ.ಎನ್.ಎಸ್.)


ವಿಕಿಪಿಡಿಯದಲ್ಲಿರುವ ಪುಸ್ತಕ ವಿಮರ್ಶೆಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ




ಕೃಪೆ: https://kn.wikisource.org/s/5v7 ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ



ವಿಮರ್ಶೆ ಇಲ್ಲಿ ಕ್ಲಿಕ್ ಮಾಡಿ  ⇓⇓⇓

Related imageRelated imageRelated image

No comments:

Post a Comment